
(ನ್ಯೂಸ್ ಕಡಬ) newskadaba.com, ಸೆ.28 . ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ನಕಲಿ ಸಂದೇಶ ಹಾಗೂ ಲಿಂಕ್‌ಗಳ ಮೂಲಕ ಸಾರ್ವಜನಿಕರ ಹಣ ದೋಚಲು ಸಂಚು ರೂಪಿಸಿದ್ದಾರೆ. ‘e-KYC ಮಾಡದಿದ್ದರೆ ರೇಷನ್ ಕಾರ್ಡ್ ರದ್ದಾಗುತ್ತದೆ’ ಎಂಬ ನಕಲಿ ಮೇಸೇಜ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ e-KYC ಮಾಡಬೇಡಿ. OTP, UPI PIN ಹಾಗೂ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ,ಹಾಗೂ ಯಾವುದೇ ನಕಲಿ APK ಫೈಲ್ ಅಥವಾ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.ಅಧಿಕೃತ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ e-KYC ಪೂರ್ಣಗೊಳಿಸಿ.
ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ಅಡಚಣೆಯಿಂದ ಜನಸಾಮಾನ್ಯರು ಎದುರಿಸುತ್ತಿದ್ದ ತೊಂದರೆಯನ್ನು ಗಮನಿಸಿದ ಸರ್ಕಾರ, e-KYC ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಸಮಯಾವಕಾಶ ವಿಸ್ತರಿಸಿದೆ. ತಾಂತ್ರಿಕ ದೋಷಗಳನ್ನು ಶೀಘ್ರವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾರ್ವಜನಿಕರು ಆತಂಕಪಡದೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.




