
(ನ್ಯೂಸ್ ಕಡಬ) newskadaba.com, ಸೆ.28 . ಬಂಟ್ವಾಳ ಮಾಣಿ ಫ್ಲೈಓವರ್ ಬಳಿ ಸೋಮವಾರ ಮುಂಜಾನೆ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ.
ಮೃತಪಟ್ಟವರು ಮಡಿಕೇರಿ ನಿವಾಸಿ ನಬೀಶಾ (55). ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಮುಂಜಾನೆ ಸುಮಾರು 6 ಗಂಟೆಗೆ ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ಹಾಗೂ ಚಾಲಕ ಪೈಕಿ ಗಂಭೀರ ಗಾಯಗೊಂಡ ಮೂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು, ಮಡಿಕೇರಿ ಹಾಗೂ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯು ತೀವ್ರ ಗೊಂದಲಮಯವಾಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾದಿ ಕಿರಿದಾಗಿರುವುದು ಹಾಗೂ ಸೂಕ್ತ ಸೂಚನಾ ಫಲಕಗಳಿಲ್ಲದಿರುವುದರಿಂದ ಹೊರಗಿನಿಂದ ಬರುವ ಚಾಲಕರು ಗೊಂದಲಕ್ಕೊಳಗಾಗಿ ಅಪಘಾತಗಳು ಮರುಕಳಿಸುತ್ತಿವೆ ಎನ್ನಲಾಗಿದೆ.




