ತಯಾರಿಕಾ ದೋಷವಿರುವ ಇ-ಸ್ಕೂಟರ್ ಪೂರೈಕೆ: ಬಜಾಜ್ ಆಟೋ ಕಂಪನಿಗೆ ದಂಡ ವಿಧಿಸಿದ ಉಡುಪಿ ಗ್ರಾಹಕರ ಆಯೋಗ

(ನ್ಯೂಸ್ ಕಡಬ) newskadaba.com, ಸೆ. 24 . ಉತ್ಪಾದನಾ ದೋಷವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೂರೈಸಿ ಸೇವೆಯಲ್ಲಿ ಲೋಪ ಎಸಗಿದ್ದಕ್ಕಾಗಿ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೇತಕ್ ಬಜಾಜ್ ಆಟೋ ಕಂಪನಿಗೆ ದಂಡ ವಿಧಿಸಿದೆ.ಕಾಪು ತಾಲೂಕಿನ ಮಣಿಪುರದ ರಿತೇಶ್ ಎಸ್. ಸುವರ್ಣ ಅವರು ಖರೀದಿಸಿದ್ದ ಚೇತಕ್ ಇ-ಸ್ಕೂಟರ್ ಬ್ಯಾಟರಿಯಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮೊದಲ ಮೂರು ಸರ್ವೀಸ್‌ಗಳಲ್ಲೇ ಎರಡು ಬಾರಿ ಬ್ಯಾಟರಿ ಬದಲಾಯಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ.
ಕಂಪನಿಗೆ ನೋಟಿಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ನ್ಯಾಯಾಲಯದ ಬಾಗಿಲು ತಟ್ಟಿದ್ದರು.ಪರಿಶೀಲನೆ ನಡೆಸಿದ ಆಯೋಗದ ಅಧ್ಯಕ್ಷ ಸುನಿಲ್ ಟಿ. ಮಸರೆಡ್ಡಿ ಹಾಗೂ ಸದಸ್ಯೆ ಸುಜಾತಾ ಬಿ. ಕೊರಳ್ಳಿ ಅವರ ಪೀಠವು, ಇದು ತಯಾರಿಕಾ ದೋಷ ಹಾಗೂ ಸೇವೆಯ ಲೋಪ ಎಂದು ಸ್ಪಷ್ಟಪಡಿಸಿದೆ.
ವಾಹನದ ಖರೀದಿ ಬೆಲೆ ₹1,21,750 ಅನ್ನು ಶೇ. 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಲು ಮತ್ತು ಇತರೆ ವೆಚ್ಚಗಳಿಗಾಗಿ ₹15,000 ಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಲಾಗಿದೆ.ಗ್ರಾಹಕರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಮತ್ತು ಪ್ರವೀಣ್ ಪೂಜಾರಿ ವಾದ ಮಂಡಿಸಿದ್ದರು.

Scroll to Top