
(ನ್ಯೂಸ್ ಕಡಬ) newskadaba.com, ಸೆ. 24 . ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಲಾಗಿದ್ದ ಅಮೂಲ್ಯ ಬಂಗಾರದ ಕಿರೀಟವೊಂದು ನಾಪತ್ತೆಯಾಗಿದ್ದು, ಅದರ ಜಾಗದಲ್ಲಿ ನಕಲಿ ಕಿರೀಟ ಪತ್ತೆಯಾಗಿದೆ ಎಂದು ಮಾತೃಭೂಮಿ ವರದಿ ಮಾಡಿದೆ. ಕೇರಳ ಹೈಕೋರ್ಟ್ ಆದೇಶದಂತೆ ನಡೆಯುತ್ತಿದ್ದ ಲೆಕ್ಕಪರಿಶೋಧನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಪವಿತ್ರ ಆಭರಣಗಳ ಪಟ್ಟಿಯನ್ನು ಪರಿಶೀಲಿಸುವ ವೇಳೆ ಸನ್ನಿಧಾನದ ಭಂಡಾರದಲ್ಲಿದ್ದ ಕಿರೀಟದ ತೂಕದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಅಸಲಿ ಕಿರೀಟವು 55.72 ಪವನ್, ಅಂದರೆ ಸುಮಾರು 445.78 ಗ್ರಾಂ ತೂಕ ಹೊಂದಿದ್ದರೆ, ಪ್ರಸ್ತುತ ಭಂಡಾರದಲ್ಲಿ ಪತ್ತೆಯಾಗಿರುವ ಕಿರೀಟವು ಕೇವಲ 240 ಗ್ರಾಂ ತೂಕ ಹೊಂದಿದೆ ಎನ್ನಲಾಗಿದೆ.
ಅಂದರೆ ಅಸಲಿ ಕಿರೀಟಕ್ಕೆ ಹೋಲಿಸಿದರೆ ಪತ್ತೆಯಾಗಿರುವ ಕಿರೀಟವು ಸುಮಾರು 206 ಗ್ರಾಂ ಕಡಿಮೆ ತೂಕ ಹೊಂದಿದೆ. ಕಿರೀಟ ಸವೆದು ತೂಕ ಕಡಿಮೆಯಾಗಿರುವ ಸಾಧ್ಯತೆ ಇಲ್ಲ ಎಂಬ ಹಿನ್ನೆಲೆಯಲ್ಲಿ, ಅಸಲಿ ಕಿರೀಟವನ್ನು ತೆಗೆದು ಅದರ ಬದಲಿಗೆ ನಕಲಿ ಕಿರೀಟ ಇರಿಸಿರುವ ಶಂಕೆ ತನಿಖಾಧಿಕಾರಿಗಳಲ್ಲಿದೆ. ಈ ಬಂಗಾರದ ಕಿರೀಟವನ್ನು 2012ರ ಆಗಸ್ಟ್ 17ರಂದು ಅಯ್ಯಪ್ಪ ಸ್ವಾಮಿಗೆ ಕಾಣಿಕೆಯಾಗಿ ಅರ್ಪಿಸಲಾಗಿತ್ತು ಎನ್ನಲಾಗಿದೆ.
ದೇವಸ್ಥಾನಕ್ಕೆ ಬರುವ ಮೌಲ್ಯಯುತ ಆಭರಣಗಳನ್ನು ಸಾಮಾನ್ಯವಾಗಿ ಸನ್ನಿಧಾನದ ಭಂಡಾರದಲ್ಲಿ ಇರಿಸಿ ಬಳಿಕ ಹೆಚ್ಚಿನ ಭದ್ರತೆಯಿರುವ ಕೇಂದ್ರೀಯ ಭಂಡಾರಕ್ಕೆ ವರ್ಗಾಯಿಸುವ ನಿಯಮವಿದೆ. ಆದರೆ, ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದ ದಾಖಲೆಗಳ ಪ್ರಕಾರ ಈ ಕಿರೀಟವನ್ನು ಕೇಂದ್ರೀಯ ಭಂಡಾರಕ್ಕೆ ವರ್ಗಾಯಿಸಿರುವ ದಾಖಲೆಗಳು ಕಂಡುಬಂದಿಲ್ಲ ಎನ್ನಲಾಗಿದೆ. ಕಿರೀಟ ಇರಿಸಲಾಗಿದ್ದ ಸನ್ನಿಧಾನದ ಭಂಡಾರದಲ್ಲಿ ಸಿಸಿಟಿವಿ ಕಣ್ಗಾವಲು ಇಲ್ಲದಿರುವುದು ತನಿಖೆಗೆ ಮತ್ತೊಂದು ಸವಾಲಾಗಿದೆ..
ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಪ್ರತಿಕ್ರಿಯಿಸಿದ್ದು, ಕಿರೀಟ ನಾಪತ್ತೆಯಾಗಿರುವ ವಿಚಾರ ಮಾಧ್ಯಮಗಳ ಮೂಲಕವೇ ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಸಂಪೂರ್ಣ ವಿವರಗಳನ್ನು ಪಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ಕಿರೀಟ ನಿಜವಾಗಿಯೂ ನಾಪತ್ತೆಯಾಗಿದ್ದರೆ ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಅಧಿಕೃತ ತನಿಖೆಯ ಮೂಲಕವೇ ಕಿರೀಟವನ್ನು ಯಾರು ಮತ್ತು ಹೇಗೆ ಬದಲಾಯಿಸಿದ್ದಾರೆ ಎಂಬುದು ಪತ್ತೆಯಾಗಬೇಕು ಎಂದು ಅವರು ತಿಳಿಸಿದ್ದಾರೆ. ಹೈಕೋರ್ಟ್ ಮೇಲ್ವಿಚಾರಣೆ, ವಿಶೇಷ ಕಮಿಷನರ್ ಹಾಗೂ ವಿಜಿಲೆನ್ಸ್ ವಿಭಾಗಗಳಿದ್ದರೂ ಇಂತಹ ಲೋಪಗಳು ಬೆಳಕಿಗೆ ಬರುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಅಸಲಿ ಕಿರೀಟ ಎಲ್ಲಿದೆ ಮತ್ತು ನಕಲಿ ಕಿರೀಟವನ್ನು ಯಾರು ಇರಿಸಿದರು ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ.




