
(ನ್ಯೂಸ್ ಕಡಬ) newskadaba.com, ಸೆ. 19 . ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ ವಿಷಯದಲ್ಲಿ ಆಸಕ್ತಿಯಿರುವ ಅಭ್ಯರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.ಜಲ ಸಂಪನ್ಮೂಲ ವಲಯದಲ್ಲಿ ಹೈಡ್ರೋ-ಇನ್ಫರ್ಮ್ಯಾಟಿಕ್ಸ್‌ಗಾಗಿ AI/ML’ (AI/ML for Hydro-informatics) ಎಂಬ ವಿಷಯದಡಿ ಈ ತರಬೇತಿಯನ್ನು ನೀಡಲಾಗುತ್ತಿದ್ದು, ಆಸಕ್ತರು ಅಕ್ಟೋಬರ್ 4 ರೊಳಗಾಗಿ ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಈ ತರಬೇತಿ ಕಾರ್ಯಕ್ರಮವನ್ನು ಡೆಹ್ರಾಡೂನ್‌ನಲ್ಲಿರುವ ಇಸ್ರೋದ ಅಂಗಸಂಸ್ಥೆಯಾದ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್’ ನಡೆಸಿಕೊಡಲಿದೆ. ಜಲ ಸಂಪನ್ಮೂಲ ಕ್ಷೇತ್ರ ಹಾಗೂ ಹೈಡ್ರೋ-ಇನ್ಫರ್ಮ್ಯಾಟಿಕ್ಸ್ ವಿಭಾಗದಲ್ಲಿ AI ಮತ್ತು ML ತಂತ್ರಜ್ಞಾನಗಳ ಬಳಕೆಯ ಕುರಿತು ವಿದ್ಯಾರ್ಥಿಗಳು ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಸಂಪೂರ್ಣ ಡಿಜಿಟಲ್ ಜ್ಞಾನ ಒದಗಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.
ತರಬೇತಿಯ ಲೈವ್ ಮತ್ತು ಸಂವಾದಾತ್ಮಕ ಅವಧಿಗಳನ್ನು IIRS YouTube ಚಾನೆಲ್ ಮೂಲಕ ನಡೆಸಲಾಗುತ್ತದೆ.
ಕಲಿಕಾ ಸಾಮಗ್ರಿಗಳು: ಇಸ್ರೋದ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ದೈನಂದಿನ ಕೋರ್ಸ್ ಮೆಟೀರಿಯಲ್‌ಗಳು, ರೆಕಾರ್ಡ್ ಮಾಡಿದ ವೀಡಿಯೊಗಳು ಮತ್ತು ರಸಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುತ್ತದೆ.
ತರಬೇತಿ ಸಮಯದಲ್ಲಿ ಅಭ್ಯರ್ಥಿಗಳು ದೈನಂದಿನ ರಸಪ್ರಶ್ನೆಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು Course Dedication ಎಂದು ಮೌಲ್ಯಮಾಪನ ಮಾಡಲಾಗುತ್ತದೆ.
ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮತ್ತು ನಿಗದಿತ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಇಸ್ರೋ ವತಿಯಿಂದ ‘ಕೋರ್ಸ್ ಭಾಗವಹಿಸುವಿಕೆ ಪ್ರಮಾಣಪತ್ರ’ವನ್ನು ನೀಡಲಾಗುತ್ತದೆ. ಇದನ್ನು ಅಭ್ಯರ್ಥಿಗಳು ಇಸ್ರೋದ ‘e-class LMS’ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4, 2026. ತರಬೇತಿ ನಡೆಯುವ ಅವಧಿ: ಅಕ್ಟೋಬರ್ 5 ರಿಂದ ಅಕ್ಟೋಬರ್ 10, 2026.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ಪೋರ್ಟಲ್ isrolms.iirs.gov.in/edusatregistration ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.




