ಬಿಳಿನೆಲೆ: ಪಂಚಾಯತ್‌ ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ

(ನ್ಯೂಸ್‌ ಕಡಬ) newskadaba.com, ಸೆ. 19 . ಕಡಬ: ಕಡಬ ತಾಲೂಕಿನ ಬಿಳಿನೆಲೆ, ಐತ್ತೂರು ಹಾಗೂ ಕಡ್ಯ ಕೊಣಾಜೆ ಗ್ರಾ.ಪಂ.ಗಳ ಗ್ರಂಥಾಲಯಗಳಿಗೆ ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ಸಂಸ್ಥೆ  ವಿಜಯಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಕೊಡುಗೆಯಾಗಿ ಒಟ್ಟು  53 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು  ಬಿಳಿನೆಲೆ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಸಮಾರಂಭದಲ್ಲಿ  ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು    ಉದ್ಘಾಟಿಸಿ ಪುಸ್ತಕಗಳನ್ನು ಹಸ್ತಾಂತರಿಸಿ ಮಾತನಾಡಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪಾಡಿ ರಾಜೇಂದ್ರ ರೈ ಅವರು ನಮಗೆ ವಿಪುಲವಾದ ಜ್ಞಾನವನ್ನು ನೀಡುವ ಪುಸ್ತಕಗಳನ್ನು  ಓದುವ ಹವ್ಯಾಸ ಇಂದಿನ ದಿನಗಳಲ್ಲಿ  ಇಳಿಮುಖವಾಗಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗÜಳ ಜೊತೆಗೆ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಅಳವಡಿಸಿಕೊಳ್ಳಬೇಕು. ಸಾರ್ವಜನಿಕರು ಕೂಡ ಗ್ರಾಮದ ಗ್ರಂಥಾಲಯಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಪುಸ್ತಕದ ಓದಿನಿಂದ ಜ್ಞಾನ ಲಭಿಸುವುದರ ಜೊತೆಗೆ ನಮ್ಮ ಏಕಾಗ್ರತೆ ಕೂಡ ವೃದ್ಧಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್‌ ಅವರು ಮಾತನಾಡಿ ವಿಜಯ ಬ್ಯಾಂಕ್‌ ಮೂಲಕ ಹುಟ್ಟು ಹಾಕಲ್ಪಟ್ಟವಿಜಯ ಗ್ರಾಮೀಣ ಅಭಿವೃದ್ಧಿ  ಪ್ರತಿಷ್ಠಾನವು ಪ್ರಸ್ತುತ ಬ್ಯಾಂಕ್‌ ಆಫ್‌ ಬರೋಡಾ ಸಂಯೋಜಿತ ಸಂಸ್ಥೆಯಾಗಿ ಜನರಿಗೆ ವೃತ್ತಿಪರ ಕೌಶಲಗಳನ್ನು  ಕಲಿಸಿಕೊಡುವ ಕಾರ್ಯಕ್ರಮಗಳನ್ನು ನಡೆಸಿ ಸ್ವಾವಲಂಬಿ ಸಮಾಜದ ನಿರ್ಮಾಣದಲ್ಲಿ ಕೈಜೋಡಿಸುತ್ತಿದೆ. ವಿಶೇಷವಾಗಿ ಕೃಷಿ ಸಂಬಂಧಿತ ತರಬೇತಿಗಳನ್ನು  ಆಯೋಜಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಳಿನೆಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಅವರು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ  ಪುಸ್ತಕಗಳಿಂದ ದೊರೆಯುವ ಜ್ಞಾನ ನಮ್ಮ ಯಶಸ್ಸಿಗೆ ಸಹಕಾರಿಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷæಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ದಿನ ಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷæಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು ಅತ್ಯಗತ್ಯ. ನಮ್ಮ ಗ್ರಂಥಾಲಯಗಳಲ್ಲಿ  ಅಂತಹ ಬೆಲೆಬಾಳುವ ಪುಸ್ತಕಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಸಾರ್ವಜನಿಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಪುಸ್ತಕ ಕೊಡುಗೆ ನೀಡಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕ್‌ ಆಫ್‌ ಬರೋಡ ನೆಟ್ಟಣ ಶಾಖೆಯ ಪ್ರಬಂಧಕ ಎನ್‌.ತಿರುನಾವುಕ್ಕರಸು ನಟರಾಜನ್‌ ಶುಭಹಾರೈಸಿದರು. ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಎನ್‌.ಕೆ. ಅತಿಥಿಯಾಗಿ ಆಗಮಿಸಿದ್ದರು. ಮರ್ದಾಳ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ  ನಾಗೇಶ್‌ ಗೌಡ ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಲಾದ ರಸಪ್ರಶ್ನೆ  ಕಾರ್ಯಕ್ರಮದಲ್ಲಿ ವಿಜೇತನಾದ ಬಿಳಿನೆಲೆ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ಕ್ರಿಷ್‌ ಅವರಿಗೆ ಪ್ರತಿಷ್ಠಾನದ ವತಿಯಿಂದ ಬಹುಮಾನ ನೀಡಲಾಯಿತು

ಕಡ್ಯ ಕೊಣಾಜೆ ಗ್ರಂಥಾಲಯ ಮೇಲ್ವಿಚಾರಕ ಸಂದೀಪ್‌ ಎಸ್‌. ಸ್ವಾಗತಿಸಿ, ಬಿಳಿನೆಲೆ ಗ್ರಂಥಾಲಯ ಮೇಲ್ವಿಚಾರಕಿ ಸಂಗೀತಾ  ವಂದಿಸಿದರು.  ಐತ್ತೂರು ಗ್ರಂಥಾಲಯ ಮೇಲ್ವಿಚಾರಕಿ ವೇಜಾಶ್ರೀ ನಿರೂಪಿಸಿದರು.

ಬಿಳಿನೆಲೆ: ಪಂಚಾಯತ್‌ ಗ್ರಂಥಾಲಯಗಳಿಗೆ ಪುಸ್ತಕ ಹಸ್ತಾಂತರಿಸಲಾಯಿತು.

Scroll to Top