ಕಾರಿಂಜೇಶ್ವರ ದೇವಸ್ಥಾನದಲ್ಲಿ ವೈಭವದ ಕದಿರು ಉತ್ಸವ: ಶ್ರದ್ಧಾಭಕ್ತಿಯಿಂದ ನೆರವೇರಿದ ತೆನೆ ಹಬ್ಬ

(ನ್ಯೂಸ್‌ ಕಡಬ) newskadaba.com, ಸೆ. 19 . ಬಂಟ್ವಾಳ: ಕಾವಳಮೂಡೂರು ಗ್ರಾಮದ ಐತಿಹಾಸಿಕ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಕದಿರು ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.

ಕನ್ಯಾ ಸಂಕ್ರಮಣದ ಮರುದಿನ ನೆರವೇರುವ ಈ ಪವಿತ್ರ ಉತ್ಸವಕ್ಕಾಗಿ ಅರ್ಚಕರು, ತಂತ್ರಿಗಳು ಹಾಗೂ ಕ್ಷೇತ್ರದ ಗಣ್ಯರು ಮುಂಜಾನೆ ವಾದ್ಯವೃಂದದೊಂದಿಗೆ ಕಾಲ್ನಡಿಗೆಯಲ್ಲಿ ಸರಪಾಡಿಯ ಹಲ್ಲಂಗಾಲು ಗದ್ದೆಗೆ ತೆರಳಿದರು. ಮಾರ್ಗಮಧ್ಯದ ಏಳು ಕಟ್ಟೆಗಳಲ್ಲಿ ಹಾಗೂ ಹಲ್ಲಂಗಾರು ಕಟ್ಟೆಯಲ್ಲಿ ಸಂಪ್ರದಾಯಬದ್ಧ ವಿಶೇಷ ಪೂಜೆ ಸಲ್ಲಿಸಿದ ನಂತರ ಕದಿರು ತೆನೆಗಳನ್ನು ಸಂಗ್ರಹಿಸಿ, ಭವ್ಯ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಯಿತು.

ದೇವಸ್ಥಾನದಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿ ದೇವರಿಗೆ ಕದಿರು ಸಮರ್ಪಿಸಿದ ಬಳಿಕ, ಸಾಂಪ್ರದಾಯಿಕ ವಿಧಿಯಂತೆ ತೆನೆ ಕಟ್ಟುವ ಕೈಂಕರ್ಯ ನಡೆಯಿತು. ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮಸ್ಥರು ಪವಿತ್ರ ಕದಿರನ್ನು ಮನೆಗಳಿಗೆ ಕೊಂಡೊಯ್ದು, ಹೊಸ ಅಕ್ಕಿಯ ಅಡುಗೆ ತಯಾರಿಸಿ ಕುಟುಂಬ ಸಮೇತರಾಗಿ ಸಂಭ್ರಮದಿಂದ ತೆನೆ ಹಬ್ಬವನ್ನು ಆಚರಿಸಿದರು.

Scroll to Top