ಮಂಗಳೂರು-ಉಜಿರೆ-ಸುಬ್ರಹ್ಮಣ್ಯ ನೂತನ ಮಾರ್ಗ ನಿರ್ಮಾಣಕ್ಕೆ ಕರಾವಳಿ ಜನರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಸೆ.18 . ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಉತ್ತೇಜನ ನೀಡಲು ರೈಲ್ವೆ ಜಾಲ ವಿಸ್ತರಣೆ ಅತ್ಯಗತ್ಯವಾಗಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಸದ್ಯಕ್ಕೆ ಬಸ್ ಸಂಚಾರವೇ ಮುಖ್ಯ ಆಸರೆಯಾಗಿದ್ದು, ವಾಹನ ದಟ್ಟಣೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಉಜಿರೆ-ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಬೇಕೆಂಬ ಕೂಗು ಗಟ್ಟಿಯಾಗಿದೆ.

ಧರ್ಮಸ್ಥಳಕ್ಕೆ ತಲುಪಲು ಸದ್ಯ ಹತ್ತಿರದ ರೈಲು ನಿಲ್ದಾಣದಿಂದ 55-60 ಕಿ.ಮೀ. ರಸ್ತೆ ಪ್ರಯಾಣ ಮಾಡಬೇಕಿದೆ. ಬೆಳ್ತಂಗಡಿ, ಉಜಿರೆ, ವೇಣೂರು ಭಾಗದ ಜನರು ದೂರದ ಮಂಗಳೂರಿಗೆ ತೆರಳಿಯೇ ರೈಲು ಹಿಡಿಯಬೇಕಾದ ಪರಿಸ್ಥಿತಿಯಿದೆ.ಹೊಸ ಮಾರ್ಗದಿಂದ ಭಕ್ತಾದಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಿರಂತರ ದರ ಏರಿಕೆಗೆ ಇದು ಉತ್ತಮ ಪರ್ಯಾಯವಾಗಲಿದೆ.

ಸ್ಥಳೀಯ ಸಣ್ಣ ಉದ್ಯಮಗಳು ಹಾಗೂ ಗೃಹ ಉತ್ಪನ್ನಗಳ ಮಾರುಕಟ್ಟೆಗೆ ಈ ರೈಲು ಸಂಪರ್ಕ ಹೊಸ ಚೇತರಿಕೆ ನೀಡಲಿದೆ.ಜಾರ್ಜ್ ಫೆರ್ನಾಂಡಿಸ್ ಅವರ ಇಚ್ಛಾಶಕ್ತಿಯಿಂದ ಕೊಂಕಣ್ ರೈಲ್ವೆ ಸಾಧ್ಯವಾದ ಮಾದರಿಯಲ್ಲೇ, ಆಧುನಿಕ ತಂತ್ರಜ್ಞಾನ ಬಳಸಿ ಈ ಯೋಜನೆಯನ್ನು ಜಾರಿಗೊಳಿಸಬೇಕು.ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕೆಂಬುದು ಕರಾವಳಿ ಜನರ ಆಶಯವಾಗಿದೆ..

Scroll to Top