(ನ್ಯೂಸ್ ಕಡಬ) newskadaba.com, ಸೆ.16 . ಗಣೇಶ ಚತುರ್ಥಿದಂದುನಡೆದ ಬೈಕ್ – ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಸೋಮವಾರ ಸಂಜೆ 7:30 ರ ಸುಮಾರಿಗೆ ವರ್ಷಿತ್ ಅವರು ಕುತ್ತಾರುವಿನಿಂದ ಮನೆಗೆ ತೆರಳುತ್ತಿದ್ದಾಗ ಕೊರಗಜ್ಜನ ಆದಿಕ್ಷೇತ್ರದ ಬಳಿ ಎದುರಿನಿಂದ ಬಂದ ಸ್ಕೂಟರ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ. ಗಂಭೀರ ತಲಪೆಟ್ಟಿನಿಂದಾಗಿ ಅವರನ್ನು ತಕ್ಷಣ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ‘ಬ್ರೈನ್ ಡೆಡ್’ ಎಂದು ಘೋಷಿಸಿದ್ದಾರೆ.
ಮಗನನ್ನು ಕಳೆದುಕೊಂಡ ದುಃಖದಲ್ಲೂ ಪೋಷಕರು ವೈದ್ಯರ ಸಲಹೆಯಂತೆ ಅಂಗಾಂಗ ದಾನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರ ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ವಿವಿಧ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, ‘ಝೀರೋ ಟ್ರಾಫಿಕ್’ ವ್ಯವಸ್ಥೆಯ ಮೂಲಕ ಅಂಗಾಂಗಗಳನ್ನು ಸುರಕ್ಷಿತವಾಗಿ ರವಾನಿಸಲಾಗುತ್ತಿದೆ.

ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




