ರೇಣುಕಸ್ವಾಮಿ ಕೊಲೆ ಕೇಸ್: ಜೈಲಿನ ಫೋನ್ ಸೌಲಭ್ಯ ದುರ್ಬಳಕೆ; ಎ-14 ಪ್ರದೂಷ್ ಬಲೆಗೆ!

(ನ್ಯೂಸ್‌ ಕಡಬ) newskadaba.com,  ಸೆ.16 . ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ವಿರುದ್ಧ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿನ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳಿಗೆ ವಂಚಿಸಿ ಪತ್ನಿಯೊಂದಿಗೆ ಮಾತನಾಡಲು ಜೈಲಿನ ಫೋನ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವುದು ಈ ಹೊಸ ಸಂಕಷ್ಟಕ್ಕೆ ಕಾರಣವಾಗಿದೆ.

ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾದ ಬೇರೊಬ್ಬ ಕೈದಿಯ ಹೆಸರನ್ನು ಬಳಸಿಕೊಂಡ ಪ್ರದೂಷ್, ಜೈಲಿನ ‘ಇನ್‌ಮೇಟ್ ಕಾಲಿಂಗ್ ಸಿಸ್ಟಮ್’ ನಲ್ಲಿ ತನ್ನ ಪತ್ನಿಯ ಮೊಬೈಲ್ ಸಂಖ್ಯೆಯನ್ನು ‘ಸಂತೋಷ್’ ಎಂಬ ಹೆಸರಿನಲ್ಲಿ ನೋಂದಾಯಿಸಿದ್ದನು.ಈ ತಂತ್ರದ ಮೂಲಕ ನಿಯಮಬಾಹಿರವಾಗಿ ಜೈಲಿನಲ್ಲಿದ್ದುಕೊಂಡೇ ತನ್ನ ಪತ್ನಿಯೊಂದಿಗೆ ಸುದೀರ್ಘವಾಗಿ ಸಂಭಾಷಣೆ ನಡೆಸುತ್ತಿದ್ದನು.

ಈ ಅಕ್ರಮ ಕೃತ್ಯಕ್ಕೆ ಜೈಲಿನ ಸಿಬ್ಬಂದಿ ‘ಮೌನೇಶ್’ ಎಂಬುವವರು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.ವಿಷಯ ತಿಳಿಯುತ್ತಿದ್ದಂತೆಯೇ ತನಿಖೆ ನಡೆಸಿದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಈಗಾಗಲೇ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಯಾಗಲು ಮುಂದಾಗಿ ನಟ ದರ್ಶನ್ ಗ್ಯಾಂಗ್‌ಗೆ ಶಾಕ್ ನೀಡಿದ್ದ ಪ್ರದೂಷ್‌ಗೆ, ಜೈಲಿನಲ್ಲೇ ನಡೆಸಿದ ಈ ನಿಯಮ ಉಲ್ಲಂಘನೆಯಿಂದ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ.

Scroll to Top