ಪನತ್ತಡಿ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ: ಓರ್ವ ವಶಕ್ಕೆ, ಇಬ್ಬರು ಪರಾರಿ

(ನ್ಯೂಸ್‌ ಕಡಬ) newskadaba.com, ಸೆ. 11. ಕಾಸರಗೋಡು: ಪನತ್ತಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕರಿಕೆ ಸಿದ್ದಿಕ್ ಎಂ.ಎಚ್. (50). ಸುಮಾರು 40 ಕೆಜಿ ಜಿಂಕೆ ಮಾಂಸ, ದೇಶೀ ನಿರ್ಮಿತ ಬಂದೂಕು ಹಾಗೂ ಮದ್ದುಗುಂಡುಗಳು. ಕಾಞಂಗಾಡ್ ವಲಯ ಅರಣ್ಯಾಧಿಕಾರಿ ಕೆ. ರಾಹುಲ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪಣತ್ತಡಿ ವಲಯ ಅರಣ್ಯಾಧಿಕಾರಿ ಎಂ.ಪಿ. ರಾಜು ನೇತೃತ್ವದ ಪಡೆ ಕಾರ್ಯಾಚರಣೆ ಕೈಗೊಂಡಿತ್ತು. ಅರಣ್ಯ ಪ್ರದೇಶದಲ್ಲಿ ಚೀಲದೊಂದಿಗೆ ತೆರಳುತ್ತಿದ್ದ ಮೂವರನ್ನು ತಡೆಯಲು ಯತ್ನಿಸಿದಾಗ ಅವರು ಪರಾರಿಯಾಗಲು ಯತ್ನಿಸಿದರು.

ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಕರಿಕೆ ಸಿದ್ದಿಕ್‌ನನ್ನು ವಶಕ್ಕೆ ಪಡೆದರೆ, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಮಾಂಸ ಜಿಂಕೆಯದ್ದೆಂದು ದೃಢಪಟ್ಟಿದ್ದು, ತನಿಖೆ ವೇಳೆ ಅರಣ್ಯ ಪ್ರದೇಶದಲ್ಲಿ ಜಿಂಕೆಯ ತಲೆ ಹಾಗೂ ಮೃತದೇಹ ಪತ್ತೆಯಾಗಿದೆ. ಪರಾರಿಯಾಗಿರುವ ನೌಫಲ್ ಮತ್ತು ಜುಬೈರ್‌ಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಚುರುಕುಗೊಳಿಸಿದೆ.

Scroll to Top