(ನ್ಯೂಸ್ ಕಡಬ) newskadaba.com, ಸೆ. 11. ಮಂಗಳೂರು: ಬಹುನಿರೀಕ್ಷಿತ ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ನಡುವಿನ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 2ನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಪರೀಕ್ಷಾರ್ಥ ಸಂಚಾರದಲ್ಲಿ ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಯಾಣಿಸಿ, ರೈಲಿನ ವೇಗ, ಕಾರ್ಯಾಚರಣಾ ಸಮಯ ಹಾಗೂ ಸುರಕ್ಷತಾ ಮಾನದಂಡಗಳನ್ನು ಸಮಗ್ರವಾಗಿ ಪರಿಶೀಲಿಸಿದರು.
ದಕ್ಷಿಣ ಪಶ್ಚಿಮ ರೈಲ್ವೆಯ ವಿದ್ಯುತ್ ,ಮೆಕ್ಯಾನಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಘಾಟ್ ಪ್ರದೇಶ ಸೇರಿದಂತೆ ಮಾರ್ಗದುದ್ದಕ್ಕೂ ರೈಲಿನ ಕಾರ್ಯಾಚರಣೆಯನ್ನು ಗಮನಿಸಿದರು. ಈ ಪ್ರಾಯೋಗಿಕ ಸಂಚಾರವು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪಿದ್ದು, ಈ ಹಿಂದೆ ಮೊದಲ ಟ್ರಯಲ್ ರನ್ ವೇಳೆ ಎದುರಾಗಿದ್ದ ತಾಂತ್ರಿಕ ಸವಾಲು ಹಾಗೂ ವಿಳಂಬದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಇದೇ ವೇಳೆ, ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಬಕ–ಪುತ್ತೂರು ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಒದಗಿಸಿರುವುದನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದ್ದಾರೆ. ಈ ನಿಲುಗಡೆಯನ್ನು ಮುಂದಿನ ದಿನಗಳಲ್ಲಿ ಶಾಶ್ವತಗೊಳಿಸುವ ಹಾಗೂ ಅಗತ್ಯಕ್ಕೆ ತಕ್ಕಂತೆ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಸರಣಿ ಪರೀಕ್ಷಾರ್ಥ ಸಂಚಾರಗಳು ಯಶಸ್ವಿಯಾಗುತ್ತಿರುವುದು ಕರಾವಳಿ ಭಾಗದ ಪ್ರಯಾಣಿಕರಲ್ಲಿ ಹರ್ಷ ಮೂಡಿಸಿದೆ.




