(ನ್ಯೂಸ್ ಕಡಬ) newskadaba.com, ಸೆ. 04 ಬೆಂಗಳೂರಿನ ಬಹುನಿರೀಕ್ಷಿತ ‘ಬೆಂಗಳೂರು ಉಪನಗರ ರೈಲು ಯೋಜನೆ’ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಮತ್ತು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದೆ.
3 ಬೋಗಿಗಳ ಸಾಮರ್ಥ್ಯದ ಒಟ್ಟು 51 ರೇಕ್ಸ್ಗಳನ್ನು ಪೂರೈಸಲು K-RIDE ಹಾಗೂ ICF ಅಧಿಕೃತ ಒಪ್ಪಂದ ಮಾಡಿಕೊಂಡಿವೆ.ಈ ಅತ್ಯಾಧುನಿಕ AC ಬೋಗಿಗಳನ್ನು ಯೋಜನೆಯ ಮಲ್ಲಿಗೆ ಮಾರ್ಗ ಮತ್ತು ಕನಕ ಮಾರ್ಗಗಳಲ್ಲಿ ಬಳಸಲಾಗುವುದು.
ಅತ್ಯಾಧುನಿಕ ವಿನ್ಯಾಸ, ನಿರ್ಮಾಣ, RDSO ಯಿಂದ ಅಗತ್ಯ ಅನುಮೋದನೆ ಪಡೆದುಕೊಳ್ಳುವುದು, ಸಿಸ್ಟಮ್ ಏಕೀಕರಣ ಹಾಗೂ ಉನ್ನತ ಸುರಕ್ಷತಾ ನಿಯಮಗಳ ಸಂಪೂರ್ಣ ನಿರ್ವಹಣೆ ಈ ಒಪ್ಪಂದದ ಅಡಿಯಲ್ಲಿದೆ.ಈ ಹೊಸ ಯೋಜನೆ ನಗರದಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆ ರೂಪಿಸಿ, ರಸ್ತೆ ಸಂಚಾರದ ಮೇಲಿನ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ.ಪ್ರಸ್ತುತ ಸಿವಿಲ್ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ವೇಳಾಪಟ್ಟಿಯಂತೆ 2028ರ ವೇಳೆಗೆ ಮಲ್ಲಿಗೆ ಮಾರ್ಗದಲ್ಲಿ ಮೊದಲ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ.








