ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಚಿಕ್ಕಪ್ಪಂದಿರ ಬ್ರೈನ್ ಮ್ಯಾಪಿಂಗ್ ಪೂರ್ಣ

(ನ್ಯೂಸ್‌ ಕಡಬ) newskadaba.com,  ಸೆ. 04  ಗೇರುಕಟ್ಟೆ ಬಳಿಯ ಸಂಬೋಳ್ಯದ 15 ವರ್ಷದ ಬಾಲಕ ಸುಮಂತ್ ನಿಗೂಢ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆತನ ಸಹೋದರ ಹಾಗೂ ಇಬ್ಬರು ಚಿಕ್ಕಪ್ಪಂದಿರ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಸುಮಂತ್ ಸಹೋದರ ಸುದರ್ಶನ್ (ಆಗಸ್ಟ್ 28), ಚಿಕ್ಕಪ್ಪಂದಿರಾದ ರಾಧಾಕೃಷ್ಣ (ಆಗಸ್ಟ್ 29) ಹಾಗೂ ಲಕ್ಷ್ಮಿನಾರಾಯಣ (ಸೆಪ್ಟೆಂಬರ್ 1) ಅವರಿಗೆ ಬ್ರೈನ್ ಮ್ಯಾಪಿಂಗ್ ನಡೆಸಲಾಗಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಸುದರ್ಶನ್ ಅವರನ್ನು ಸುಮಾರು 4 ಗಂಟೆ ಹಾಗೂ ಅರ್ಚಕ ರಾಧಾಕೃಷ್ಣ ಮತ್ತು ಅಡುಗೆಯವ ಲಕ್ಷ್ಮಿನಾರಾಯಣ ಅವರನ್ನು ತಲಾ 3 ಗಂಟೆಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಂತ್ ತಂದೆ-ತಾಯಿಯನ್ನು ಈ ಪರೀಕ್ಷೆಗೆ ಒಳಪಡಿಸಿಲ್ಲ.

ಜನವರಿ 14, 2026 ರಂದು ನಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಧನು ಪೂಜೆ’ಗೆ ತೆರಳಿದ್ದ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಶವ ಪಕ್ಕದ ಕೊಳದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಕೊಲೆ ಶಂಕೆ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದ ವಿಶೇಷ ತಂಡ ನ್ಯಾಯಾಲಯದ ಅನುಮತಿ ಪಡೆದು ನಾರ್ಕೊ ವಿಶ್ಲೇಷಣೆ ಹಾಗೂ ಬ್ರೈನ್ ಮ್ಯಾಪಿಂಗ್ ನಡೆಸುತ್ತಿದ್ದು, ಮುಂದಿನ ಹಂತದಲ್ಲಿ ಇತರ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

 

Scroll to Top