(ನ್ಯೂಸ್ ಕಡಬ) newskadaba.com ಆ. 24. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ 4 ತಿಂಗಳಿಗೊಮ್ಮೆ ರೂ. 2 ಸಾವಿರದಂತೆ ವರ್ಷಕ್ಕೆ 3 ಕಂತುಗಳಲ್ಲಿ ಒಟ್ಟು ರೂ. 6 ಸಾವಿರ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಸಹಾಯಧನ ಪಡೆಯಲು ಪ್ರತಿ ವರ್ಷವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇ-ಕೆವೈಸಿ ಪೂರ್ಣಗೊಳಿಸಲು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ ಎಂಬ ಎರಡು ವಿಧಾನಗಳಿವೆ. ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಆಧಾರ ಕಾರ್ಡ್ ಅಥವಾ ಆಧಾರ್ ಸಂಖ್ಯೆ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿಯನ್ನು ವಿ.ಎನ್.ಒ ಆ್ಯಪ್ (VNO App) ಮೂಲಕ ಮಾಡಿಸಿಕೊಳ್ಳಬೇಕು. ಪಿಎಂ ಕಿಸಾನ್ ಬಯೋಮೆಟ್ರಿಕ್ ಇ-ಕೆವೈಸಿ ವಿ.ಎನ್.ಒ ಆ್ಯಪ್ ಮೂಲಕ ಮಾಡಿಕೊಳ್ಳಲು ರೈತರಿಗೆ ಕಷ್ಟವಾದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಟ್ಟು 1,38,085 ಫಲಾನುಭವಿಗಳ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಬಾಕಿ ಇದ್ದು,ರೈತರು ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರಿತ ಅಥವಾ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ತಾಲೂಕುವಾರು ಬಯೋಮೆಟ್ರಿಕ್ ಇ-ಕೆವೈಸಿ ಬಾಕಿ ಇರುವ ರೈತರ ಸಂಖ್ಯೆ ಬಂಟ್ವಾಳ- 30,035, ಬೆಳ್ತಂಗಡಿ- 32,117, ಕಡಬ-18,025, ಮಂಗಳೂರು- 7,306, ಮೂಡಬಿದ್ರೆ- 7,431, ಮುಲ್ಕಿ- 3,706, ಪುತ್ತೂರು- 18,511, ಸುಳ್ಯ- 15,741, ಉಳ್ಳಾಲ- 5,213. ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸಿದ ರೈತರ ಖಾತೆಗೆ ಮಾತ್ರ ಮುಂದಿನ ಕಂತಿನ ಆರ್ಥಿಕ ನೆರವು ವರ್ಗಾವಣೆಯಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆ: ರೈತರ ಇ-ಕೆವೈಸಿ ಕಡ್ಡಾಯ












