(ನ್ಯೂಸ್ ಕಡಬ) newskadaba.com,ಆ.18 ಕಡಬ /ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವಶಿಷ್ಠ ಸಂಪ್ರದಾಯದAತೆ ಆಚರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ ವಿವಿಧ ವೈದಿಕ ವಿದಿವಿಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.
ಪ್ರಾತಃಕಾಲ ದೇವರಿಗೆ ವಿಶೇಷ ಪಂಚಾಮೃತ ಮಹಾಭಿಷೇಕ ನೆರವೇರಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಶ್ರದ್ಧಾ ಭಕ್ತಿಯಿಂದ ಬೆಳಗ್ಗೆ ನೆರವೇರಿತು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ಪುರೋಹಿತ ಕುಮಾರ ಭಟ್, ರಾಮಕೃಷ್ಣ ಭಟ್ ನೂಚಿಲ ಎರೆದರು. ತನುವಿನೊಂದಿಗೆ ಹಿಂಗಾರ, ಹಣ್ಣುಕಾಯಿ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು.ಮುಂಜಾನೆಯಿAದಲೇ ಸರತಿಯ ಸಾಲಿನಲ್ಲಿ ಸಾಗಿ ಬಂದು ಭಕ್ತರು ಹಾಲು ಮತ್ತು ಎಳನೀರು ಸಮರ್ಪಿಸಿದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಜುರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಅಜಿತ್ ಕುಮಾರ್ ಪಾಲೇರಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಸತೀಶ್ ಕೂಜುಗೋಡು, ಅಚ್ಯುತ್ತ ಗೌಡ ಬಳ್ಪ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ನಾಗಾರಾಧನೆಯ ಪ್ರಧಾನ ಪುಣ್ಯ ಕ್ಷೇತ್ರವಾದುದರಿಂದ ಶ್ರೀ ಕ್ಷೇತ್ರದಲ್ಲಿ ಭಕ್ತಾಧಿಗಳು ನಾಗರ ಪಂಚಮಿಯ ಪುಣ್ಯ ದಿನ ನಾಗರಾಜನ ದರುಶನ ಪಡೆದರು.ಅತ್ಯಧಿಕ ಸಂಖ್ಯೆಯಲ್ಲಿ ಊರ ಭಕ್ತರು ಬೆಳಗ್ಗೆಯಿಂದಲೇ ಭಕ್ತಾಧಿಗಳು ತನು ಸಮರ್ಪಣೆ ಮಾಡಿ ಶ್ರೀ ದೇವರ ಸೇವೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಲ್ಲಿ ಮಾರುದ್ದದ ಸರತಿ ಸಾಲಿನ ಮೂಲಕ ತೆರಳಿ ತನು ಸಮರ್ಪಿಸಿದರು. ದೇವಳದ ಸುತ್ತಲೂ ಹಾಲನ್ನು ಹಿಡಿದು ತೆರಳುವ ಮತ್ತು ತನು ಎರೆದು ಬರುವ ಭಕ್ತಾಧಿಗಳ ಸಂಖ್ಯೆ ಎದ್ದು ಕಾಣುತ್ತಿತ್ತು. ಅಧಿಕ ಸಂಖ್ಯೆಯಲ್ಲಿ ಸ್ಥಳಿಯ ಭಕ್ತರು ಹಾಗೂ ಪರವೂರಿನ ಭಕ್ತಾಧಿಗಳು ಹಾಲು ಎರೆದು ಕೃತಾರ್ಥರಾದರು.








