(ನ್ಯೂಸ್ ಕಡಬ) newskadaba.com,ಆ.18;ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೀಡಲಾಗುವ ಮೊಟ್ಟೆಗಳ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಾಮೋಜಿಗೌಡ ಅವರ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ಮಾಹಿತಿ ನೀಡಿದ್ದಾರೆ.
ಸರ್ಕಾರ ಪ್ರಸ್ತುತ ಪ್ರತಿ ಮೊಟ್ಟೆಗೆ ₹6 ನೀಡುತ್ತಿದ್ದು, ಶಾಲಾ ಮಟ್ಟ ತಲುಪುವಷ್ಟರಲ್ಲಿ ₹5 ಮಾತ್ರ ದೊರೆಯುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ ₹8ಕ್ಕಿಂತ ಹೆಚ್ಚಿರುವುದರಿಂದ ಶಿಕ್ಷಕರು ಹಾಗೂ ಶಾಲಾ ಮೇಲ್ವಿಚಾರಣಾ ಸಮಿತಿಗಳು ತಮ್ಮ ಸ್ವಂತ ಹಣದಿಂದ ವೆಚ್ಚ ಭರಿಸುವಂತಾಗಿದೆ.
ದೇಶಾದ್ಯಂತ ಸರಾಸರಿ ಮೊಟ್ಟೆ ಬೆಲೆ ₹7 ರಷ್ಟಿದ್ದು, ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸಬ್ಸಿಡಿ ಹೆಚ್ಚಿಸಲು ಶೀಘ್ರವೇ ಹಣಕಾಸು ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಿ ಮೊಟ್ಟೆ ಪೂರೈಕೆಗೆ ಪ್ರತ್ಯೇಕ ಏಜೆನ್ಸಿ ವ್ಯವಸ್ಥೆ ಜಾರಿಗೊಳಿಸಬೇಕು ಮತ್ತು ಬೋಧನೆಗೆ ಮಾತ್ರ ಆದ್ಯತೆ ನೀಡಬೇಕೆಂದು ರಾಮೋಜಿಗೌಡ ಒತ್ತಾಯಿಸಿದ್ದಾರೆ.








