(ನ್ಯೂಸ್ ಕಡಬ) newskadaba.com ಮರ್ಧಾಳ, ಆ. 07. ಶತಮಾನ ಕಂಡ ಕಡಬ ತಾಲೂಕಿನ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣವಾಗಿ ಶಿಥಿಲಗೊಂಡಿರುವ ಶಾಲಾ ಕಟ್ಟಡದಲ್ಲಿನ ಎಲ್ಲಾ ತರಗತಿ ಕೊಠಡಿಗಳ ಬಳಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸೂಚನೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು, ಮೇಲ್ಛಾವಣಿಯ ಭಾಗಗಳು ಉದುರುತ್ತಿರುವುದು ಹಾಗೂ ಕಟ್ಟಡ ದುರ್ಬಲಗೊಂಡಿರುವ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರದಂದು ಶಾಲೆಗೆ ಭೇಟಿ ನೀಡಿದ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ಯವರು ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಕಟ್ಟಡದ ಕೆಲವು ಭಾಗಗಳು ವಿದ್ಯಾರ್ಥಿಗಳ ಬಳಕೆಗೆ ಸುರಕ್ಷಿತವಾಗಿಲ್ಲ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಿಥಿಲಗೊಂಡಿರುವ ತರಗತಿ ಕೊಠಡಿಗಳನ್ನು ತಕ್ಷಣದಿಂದಲೇ ಬಳಕೆ ಮಾಡದಂತೆ ಸೂಚನೆ ನೀಡಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವುದು ಇಲಾಖೆಯ ಉದ್ದೇಶವಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಠಗಳಿಗೆ ಅಡಚಣೆ ಉಂಟಾಗದಂತೆ ಪರ್ಯಾಯ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲು ಅಥವಾ ಅಗತ್ಯವಿರುವ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಶಾಲಾ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. ಅಲ್ಲದೆ, ಕಟ್ಟಡದ ತಾಂತ್ರಿಕ ಪರಿಶೀಲನೆ ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಶಾಲಾ ಕಟ್ಟಡದ ದುಸ್ಥಿತಿಯಿಂದ ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಹಲವು ವರ್ಷಗಳಿಂದ ಶಾಲೆಯ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಸರ್ಕಾರ ತುರ್ತಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಪರ್ಯಾಸವೆಂದರೆ ದಶಕಗಳ ಹಿಂದೆ ವಾರ್ಷಿಕ ಸುಮಾರು 500ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ ಪ್ರಸ್ತುತ 94 ವಿದ್ಯಾರ್ಥಿಗಳಿದ್ದು, ಒಟ್ಟು 10 ಕೊಠಡಿಗಳ ಪೈಕಿ ಐದನ್ನು ಈಗಾಗಲೇ ಕೆಡವಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಇನ್ನೂ ಮುಹೂರ್ತ ಒದಗಿ ಬಂದಿಲ್ಲ. ಇನ್ನುಳಿದ 5 ಕೊಠಡಿಗಳನ್ನು ಮತ್ತು ಒಂದು ಸಭಾಂಗಣವನ್ನು ಕೆಡವಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದು, ಪೋಷಕರನ್ನು ಕಂಗೆಡುವಂತೆ ಮಾಡಿದೆ. ಪ್ರಸಕ್ತ ವರ್ಷದಿಂದ ಸ್ಥಳೀಯರ ಸಹಕಾರದಿಂದ LKG ಹಾಗೂ UKG ತರಗತಿ ಆರಂಭಿಸಲಾಗಿದ್ದು, ಇನ್ಮುಂದೆ ಶಾಲೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಆಟದ ಮೈದಾನದ ಬಳಿಯಿರುವ ಎರಡು ಕೊಠಡಿಗಳಲ್ಲಿ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಶಾಲೆಯ ಒಟ್ಟು ವಿದ್ಯಾರ್ಥಿಗಳಿಗೆ ಕೇವಲ ಎರಡು ಕೊಠಡಿಗಳಲ್ಲಿ ಪಾಠ ಹೇಳಿಕೊಟ್ಟುವುದು ಹೇಗೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಶಿಕ್ಷಣ ಇಲಾಖೆಯು ತಾಂತ್ರಿಕ ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಶತಮಾನ ಕಳೆದ ಬಂಟ್ರ ಶಾಲೆಯ ಹಳೆಯ ಕಟ್ಟಡಗಳು ಈಗಾಗಲೇ ಬಿರುಕು ಬಿಟ್ಟಿದ್ದು, ಇನ್ಮುಂದೆ ಆ ಕಟ್ಟಡದಲ್ಲಿ ತರಗತಿ ನಡೆಸದಂತೆ ಸೂಚನೆ ನೀಡಲಾಗಿದೆ. ಆದಷ್ಟು ಶೀಘ್ರವಾಗಿ ಹೊಸ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೊಂದಿಗೆ ಸಮಾಲೋಚನೆ ನಡೆಸಲಾಗುವುದು.”
ಸುರೇಶ್ ಡಿ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು
“ಸುಮಾರು 12 ಶಾಲೆಗಳ ಕೇಂದ್ರ ಶಾಲೆ ಆಗಿರುವಂತಹ ಬಂಟ್ರ ಕ್ಲಸ್ಟರ್ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿರುವುದು ವಿಷಾದನೀಯವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರು ಗಮನಹರಿಸಬೇಕು.”
ಮಾಮಚ್ಚನ್ ಎಂ., ಅಧ್ಯಕ್ಷರು, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖಾ ನೌಕರರ ಸಂಘ ಪುತ್ತೂರು, ಕಡಬ ತಾಲೂಕು ಸಮಿತಿ
“ಸುಮಾರು 12 ಶಾಲೆಗಳ ಕೇಂದ್ರ ಶಾಲೆ ಆಗಿರುವಂತಹ ಬಂಟ್ರ ಕ್ಲಸ್ಟರ್ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿರುವುದು ವಿಷಾದನೀಯವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರು ಗಮನಹರಿಸಬೇಕು.”
ಮಾಮಚ್ಚನ್ ಎಂ.
ಅಧ್ಯಕ್ಷರು, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖಾ ನೌಕರರ ಸಂಘ ಪುತ್ತೂರು, ಕಡಬ ತಾಲೂಕು ಸಮಿತಿ





