ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ



(ನ್ಯೂಸ್‌ ಕಡಬ) newskadaba.com,  ಜು.27  ಕಡಬ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಕಚೇರಿಯಲ್ಲಿ ತಾಲೂಕು ಭಜನಾ ಪರಿಷತ್ತಿನ ವಿಶೇಷ ಸಭೆ ಭಾನುವಾರ ನಡೆಯಿತು.ರಾಜ್ಯ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಭಜನಾ ಪರಿಷತ್ತಿನ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ಭಜನಾ ಪರಿಷತ್ತಿನ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದು, ಕಡಬ ತಾಲೂಕು ಭಜನಾ ಪರಿಷತ್ತು ರಾಜ್ಯದಲ್ಲೇ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







ಭಜನೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳನ್ನೂ ಭಜನಾ ಮಂಡಳಿಗಳು ಕೈಗೊಂಡಾಗ ಪೂಜ್ಯರ ಆಶಯ ಮತ್ತಷ್ಟು ಅರ್ಥಪೂರ್ಣವಾಗುತ್ತದೆ ಎಂದರು.ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದು, ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ, ಪ್ರಕೃತಿ ವಿಕೋಪಗಳ ಸಂದರ್ಭ ತುರ್ತು ನೆರವಿಗಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಭಜನಾ ಪರಿಷತ್ತನ್ನು ಸ್ಥಾಪಿಸಿದ್ದಾರೆ.






ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಪೂಜ್ಯರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಅವರು ಸೆಪ್ಟೆಂಬರ್ 28ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕುರಿತು ಮಾಹಿತಿ ನೀಡಿದರು.

ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಂದರ ಗೌಡ ಒಗ್ಗು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಸತ್ಯನಾರಾಯಣ ಹೆಗ್ಡೆ, ವಲಯ ಭಜನಾ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.ಬಿಳಿನೆಲೆ ವಲಯದ ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸವಣೂರು ವಲಯದ ಹರ್ಷಿಣಿ ಸ್ವಾಗತಿಸಿ, ದಿವೀಶ್ ನಾವೂರು ವಂದಿಸಿದರು.

error: Content is protected !!
Scroll to Top