(ನ್ಯೂಸ್ ಕಡಬ) newskadaba.com, ಜು.27: ಯುವಜನರಲ್ಲಿ ಹೆಚ್ಐವಿ ಸೋಂಕು ಹೆಚ್ಚಾಗುತ್ತಿರುವ ಆತಂಕಕಾರಿ ವರದಿಗಳ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಕರ್ನಾಟಕ ಆರೋಗ್ಯ ಇಲಾಖೆ ನಿರ್ಧರಿಸಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ವರದಿಗಳ ಪ್ರಕಾರ, ಹೆಚ್ಐವಿ ಬಾಧಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಅದರಲ್ಲಿ 54,000 ಮಂದಿಗೆ ತಮಗೆ ಸೋಂಕು ತಗಲಿರುವುದರ ಬಗ್ಗೆ ಅರಿವೇ ಇಲ್ಲ.18ರಿಂದ 35 ವರ್ಷದ ಯುವ ಸಮೂಹದಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, 18ರಿಂದ 25 ವರ್ಷದ 7,000 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಆರಂಭಿಕ ಹಂತದಲ್ಲೇ ಸೋಂಕು ಗುರುತಿಸಲು ಹಾಗೂ ವಿದ್ಯಾರ್ಥಿಗಳ ಗೌಪ್ಯತೆಯನ್ನು ಕಾಪಾಡಲು ‘ನಿಮ್ಮ ಹೆಚ್ಐವಿ ಸ್ಥಿತಿ ತಿಳಿದುಕೊಳ್ಳಿ’ ಎಂಬ ಕ್ಯೂಆರ್ ಕೋಡ್ ಆಧಾರಿತ ಸ್ವಯಂ ಅಪಾಯ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.ಸೋಂಕು ತಡೆಗಟ್ಟುವ ಈ ವಿಶೇಷ ಅಭಿಯಾನಕ್ಕೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.









