ಸಂಪಾಜೆ ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು – ನಿಷ್ಪಕ್ಷಪಾತ ತನಿಖೆಗೆ ಎಸ್‌ಡಿಪಿಐ ಆಗ್ರಹ ಕೊಲೆ/ಆತ್ಮಹತ್ಯೆ ಪ್ರಚೋದನೆ ಆರೋಪಿಗಳನ್ನು ಬಂಧಿಸಿ ರಾತ್ರಿಯೊಳಗೆ ಬಿಡುಗಡೆಗೊಳಿಸಿದ್ದು ಖಂಡನೀಯ: ಮೀರಝ್ ಸುಳ್ಯ



(ನ್ಯೂಸ್ ಕಡಬ) newskadaba.com ಸುಳ್ಯ, ಜು. 22. ತಾಲೂಕಿನ ಸಂಪಾಜೆಯಲ್ಲಿ ಜೂನ್ 18 ರಂದು ಸಂಭವಿಸಿರುವ ವಿವಾಹಿತ ಮಹಿಳೆ ಫಾತಿಮತ್ ನಿಶಾನರವರ ಮೃತ್ಯು ಪ್ರಕರಣವು ತೀವ್ರ ಆಘಾತಕಾರಿ ಹಾಗೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.







ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿರುವಂತೆ, ಇದು ಕೇವಲ ಆತ್ಮಹತ್ಯೆಯಲ್ಲ, ಬದಲಾಗಿ ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೂಕ್ತ ತನಿಖೆ ನಡೆಸಿ ಘಟನೆಯ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯರವರು ಆಗ್ರಹಿಸಿದ್ದಾರೆ‌.






ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು
​ಫಾತಿಮತ್ ನಿಶಾನ ಅವರು ಮೃತಪಡುವ ಕೆಲವೇ ಕ್ಷಣಗಳ ಮೊದಲು ತನ್ನ ತಾಯಿಗೆ ಕರೆ ಮಾಡಿ, ಗಂಡನ ಮನೆಯವರಿಂದ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಮಗಳು ನೀಡಿದ ಕರೆ ಬಂದ ಕೆಲವೇ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿಬಂದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮೃತದೇಹವನ್ನು ತರಾತುರಿಯಲ್ಲಿ ಮನೆಯ ಹೊರಗಡೆ ಮಲಗಿಸಿರುವುದು ಮತ್ತು ಮರಣೋತ್ತರ ಪರೀಕ್ಷೆಗೆ ರವಾನಿಸುವ ಮುನ್ನ ನಡೆದ ಘಟನಾವಳಿಗಳು ಪ್ರಕರಣವನ್ನು ಮತ್ತಷ್ಟು ಸಂಶಯಾಸ್ಪದವಾಗಿಸಿದೆ.

​ದೌರ್ಜನ್ಯಕ್ಕೊಳಗಾಗಿ ಯುವತಿಯೋರ್ವಳು ಮೃತಪಟ್ಟಿರುವ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ಕೇವಲ ಮರಣೋತ್ತರ ಪರೀಕ್ಷೆಯ ವರದಿಯನ್ನಷ್ಟೇ ಅವಲಂಬಿಸದೆ, ಮೃತ ಮಹಿಳೆ ತನ್ನ ತಾಯಿಯೊಂದಿಗೆ ಕೊನೆಯದಾಗಿ ಮಾತನಾಡಿದ ಆಡಿಯೋ/ಕರೆ ದಾಖಲೆಗಳನ್ನು ಪರಿಗಣಿಸಿ, ಗಂಡನ ಮನೆಯವರ ಮೇಲೆ ಕೇಳಿಬಂದಿರುವ ಗಂಭೀರ ಆರೋಪಗಳ ಕುರಿತು ಪೊಲೀಸ್ ಇಲಾಖೆಯು ತಕ್ಷಣವೇ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ನಿನ್ನೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಾರ್ವಜನಿಕರು ಭಾವಿಸಿದ್ದರು, ಆದರೆ ರಾತ್ರಿಯೊಳಗಾಗಿ ಅವರನ್ನು ವಿಚಾರಣೆ ನಡೆಸಿ ಬಿಟ್ಟು ಕಳಿಸಿರುವುದು ಖಂಡನೀಯ.

ಒಂದು ವೇಳೆ ಆತ್ಮಹತ್ಯೆಯೇ ಆಗಿದ್ದರೂ ಅದಕ್ಕೆ ಪ್ರಚೋದನೆ ನೀಡಿದ ಆರೋಪಿಗಳು ಕೂಡ ಇವರೇ ಆಗಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಇದು ಕೊಲೆ ಎಂದು ಸಾಬೀತಾಗಿರುವುದರಿಂದಲೂ ಹಾಗೂ ಆತ್ಮಹತ್ಯೆ ಯಾಗಿದ್ದರೂ ಅದಕ್ಕೆ ಪ್ರಚೋದನೆ ನೀಡಿದವರು ಇವರೇ ಆಗಿರುವುದರಿಂದ ಪೋಲಿಸ್ ಇಲಾಖೆ ಫೋರೆನ್ಸಿಕ್ ವರದಿಗೆ ಕಾಯದೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ
ದೋಷಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

error: Content is protected !!
Scroll to Top