(ನ್ಯೂಸ್ ಕಡಬ) newskadaba.com ಮಂಗಳೂರು, ಜು. 15. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಒಟ್ಟು ಎನ್ಯುಮರೇಷನ್ ಫಾರ್ಮ್ ಗಳ ಪೈಕಿ ಇದುವರೆಗೆ ಮರಳಿ ಬಂದಿರುವುದು ಕೇವಲ ಶೇ. 11.86 ರಷ್ಟು ಮಾತ್ರ. ಆದ್ದರಿಂದ ಮತದಾರರು ಜುಲೈ 29ರ ಕೊನೆಯ ದಿನಾಂಕದವರೆಗೆ ಕಾಯದೆ, ತಕ್ಷಣವೇ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ. ಅವರು ವಿಶೇಷ ವಿಡಿಯೋ ಸಂದೇಶದ ಮೂಲಕ ವಿನಂತಿ ಮಾಡಿದ್ದಾರೆ.
ಫಾರ್ಮ್ ಸಲ್ಲಿಸದಿದ್ದರೆ ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು, “ಜಿಲ್ಲೆಯ ಒಟ್ಟು 18,37,666 ಮತದಾರರ ಪೈಕಿ ಬಿಎಲ್ಒಗಳು ಈಗಾಗಲೇ 17,75,811 ಜನರಿಗೆ (ಶೇ. 98.45) ಫಾರ್ಮ್ಗಳನ್ನು ವಿತರಿಸಿದ್ದಾರೆ. ಆದರೆ, ಇಲಾಖೆಗೆ ಸಾರ್ವಜನಿಕರಿಂದ ವಾಪಸ್ ಬಂದಿರುವುದು ಕೇವಲ 2,13,939 ಫಾರ್ಮ್ಗಳು ಮಾತ್ರ” ಎಂದಿದ್ದಾರೆ.









