(ನ್ಯೂಸ್ ಕಡಬ) newskadaba.com ಜು. 15. ಮೊಬೈಲ್ ಗೆ ಬಂದ ಸಂಚಾರ ನಿಯಮ ಉಲ್ಲಂಘನೆಯ ನಕಲಿ ನೋಟಿಸ್ ಹಾಗೂ ‘mParivahan.apk’ ಎಂಬ ಲಿಂಕ್ ನಂಬಿ ಆಪ್ ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹6,83,599 ಹಣ ಕಳೆದುಕೊಂಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರದಿಯ ಪ್ರಕಾರ, ಅಜೆಕಾರು ನಿವಾಸಿ ರತ್ನಾಕರ ಅಮೀನ್ ಎಂಬವರ ವಾಟ್ಸಾಪ್’ಗೆ ಜುಲೈ 5 ರಂದು ‘ಪರಿವಾಹನ್’ ಹೆಸರಿನ ಖಾತೆಯಿಂದ ಸಂದೇಶ ಬಂದಿತ್ತು. ಅದರಲ್ಲಿ ನಿಮ್ಮ ವಾಹನ ನಿಯಮ ಉಲ್ಲಂಘಿಸಿದೆ ಎಂದು ತಿಳಿಸಿ, ದಂಡದ ವಿವರಕ್ಕಾಗಿ ‘mParivahan.apk’ ಫೈಲ್ ಕಳುಹಿಸಲಾಗಿತ್ತು. ಇದನ್ನು ನಿಜವೆಂದು ನಂಬಿದ ರತ್ನಾಕರ ಅವರ ಮಗ ಫೋನ್ ನಲ್ಲಿ ಆಪ್ ಇನ್ ಸ್ಟಾಲ್ ಮಾಡಿಕೊಂಡಿದ್ದನು.
ಅಂದೇ ರಾತ್ರಿ ಕರೆ ಮಾಡಿದ ಅಪರಿಚಿತನೊಬ್ಬ ಹಿಂದಿಯಲ್ಲಿ ಮಾತನಾಡಿ, “ನಿಮ್ಮ ಬ್ಯಾಂಕ್ ಖಾತೆ ಸುರಕ್ಷಿತವಾಗಿರಲು ಗೂಗಲ್ ಪಿನ್ ಬದಲಾಯಿಸಿ, ಇಲ್ಲದಿದ್ದರೆ ಹಣ ಕಡಿತಗೊಳ್ಳುತ್ತದೆ” ಎಂದು ಹೆದರಿಸಿದ್ದನು. ಅಷ್ಟರಲ್ಲೇ ಇವರ ಫೋನ್ ಸಂಪೂರ್ಣವಾಗಿ ವಂಚಕರ ನಿಯಂತ್ರಣಕ್ಕೆ ಸಿಲುಕಿತ್ತು.
ಜುಲೈ 8 ರಂದು ರತ್ನಾಕರ ಅವರು ಬ್ಯಾಂಕಿಗೆ ತೆರಳಿ ಖಾತೆಯನ್ನು ಅನ್ ಬ್ಲಾಕ್ ಮಾಡಿಸಿದ್ದರು. ಆದರೆ ಜುಲೈ 12 ರ ರಾತ್ರಿಯಿಂದ ಇವರ ಮೊಬೈಲ್‌ಗೆ ನಿರಂತರವಾಗಿ ಹಣ ಕಡಿತದ ಸಂದೇಶಗಳು ಬರಲಾರಂಭಿಸಿದವು. ಮೊದಲ ಹಂತದಲ್ಲಿ ವಂಚಕರು ₹6,01,901 ಎಗರಿಸಿದ್ದರು. ಕೂಡಲೇ ಅವರು ಸೈಬರ್ ಸಹಾಯವಾಣಿ ‘1930’ಗೆ ದೂರು ನೀಡಿದ್ದರು.
ಜುಲೈ 13 ರಂದು ಬ್ಯಾಂಕಿಗೆ ತೆರಳಿ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ವಂಚಕರು ವಿವಿಧ ಖಾತೆಗಳಿಗೆ ಒಟ್ಟು ₹6,83,599 ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.
ದುರುದಾರ ನೀಡಿದ ದೂರಿನನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









