(ನ್ಯೂಸ್ ಕಡಬ) newskadaba.com ಜು. 14. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಮಾಸ್ಕ್ ಧರಿಸಿ, ಪ್ರಯಾಣಿಕನ ಸೋಗಿನಲ್ಲಿ ಬಿಎಂಟಿಸಿ (BMTC) ಬಸ್ನ ವ್ಯವಸ್ಥೆಗಳನ್ನು ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಚಿವರನ್ನು ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್ನಿಂದ ಇಳಿಸಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಇದು ಚಿಲ್ಲರೆ ಕಾಸಿನ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ ಎಂದು ಹೇಳಿದ್ದಾರೆ.
ಈ ನಡೆ ಶ್ಲಾಘನೀಯ ಎಂದಿರುವ ಮಾಜಿ ಸಚಿವ ಸುರೇಶ್ ಕುಮಾರ್, ಇಂದಿನ ಕ್ಯೂಆರ್ ಕೋಡ್ (QR Code) ಯುಗದಲ್ಲಿ ಇಂತಹ ಅನುಭವ ಆಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಂಡಕ್ಟರ್ ಬಳಿ ಇರುವ ಟಿಕೆಟ್ ಯಂತ್ರದಲ್ಲೇ ಡಿಜಿಟಲ್ ಪಾವತಿ ವ್ಯವಸ್ಥೆ ಇರುವಾಗ ಮಂತ್ರಿಗಳಿಗೆ ಈ ಪರಿಸ್ಥಿತಿ ಬಂದಿದ್ದೇಕೆ ಎಂದು ಪ್ರಶ್ನಿಸಿ, ಸಚಿವರಿಗೆ ಫೋನ್ ಮಾಡಲು ಪ್ರಯತ್ನಿಸಿದರೂ ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು ಎಂದು ತಿಳಿಸಿದ್ದಾರೆ. ಸಚಿವರು ಈ ರೀತಿ ಮುಖಕ್ಕೆ ಮಾಸ್ಕ್ ಧರಿಸಿ ಮಾರುವೇಷದಲ್ಲಿ ಹೋಗಿ ತನ್ನ ಇಲಾಖೆಯ ಕಾರ್ಯವೈಖರಿಯ ಪರಿಶೀಲನೆ ಮಾಡಿರುವುದು ನಿಜಕ್ಕೂ ಸ್ತುತ್ಯಾರ್ಹ.
ಸಚಿವರು 100 ರೂಪಾಯಿ ನೋಟನ್ನು ತನ್ನ ಟಿಕೆಟ್ ಗೆಂದು ಕೊಟ್ಟಾಗ, ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿರುವುದು ಸಹಜವೇ. ಆದರೆ ಇದು ಚಿಲ್ಲರೆ ಕೊಟ್ಟು ಸಹಕರಿಸಿ ಎಂಬ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿ ಮಾಡಲು ವ್ಯವಸ್ಥೆ ಇರುವಾಗ ಬಿಎಂಟಿಸಿ ಬಸ್ ಗಳಲ್ಲೂ ಕಂಡಕ್ಟರ್ ಬಳಿ ಇರುವ ಟಿಕೆಟ್ ಕೊಡುವ ಮೆಷಿನ್ ನಲ್ಲಿಯೇ ಈ ವ್ಯವಸ್ಥೆ ಇರುತ್ತದೆ ಎಂಬುದು ನನಗಿರುವ ಮಾಹಿತಿ. ಹಾಗಿದ್ದ ಮೇಲೆ ಮಂತ್ರಿಗಳಿಗೆ ಈ ರೀತಿಯ ಅನುಭವ ಹೇಗೆ ಆಯಿತು?” ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ಸಚಿವರು ಕೇವಲ ಚಿಲ್ಲರೆಯ ವಿಚಾರಕ್ಕೆ ಮಾತ್ರ ನೌಕರರನ್ನು ಅಮಾನತು ಮಾಡಲಿಲ್ಲ. ಅವರು ಪ್ರಯಾಣಿಕರೊಂದಿಗೆ ನಿರ್ಲಕ್ಷದಿಂದ ನಡೆದುಕೊಳ್ಳುವುದು, ಬೇಜವಾಬ್ದಾರಿತನ ತೋರಿಸುವುದು, ಬಸ್ ನಿಲ್ದಾಣ ಬಿಟ್ಟು ಮುಂದೆ ಹೋಗಿ ಬಸ್ ನಿಲ್ಲಿಸುವುದು, ಚಿಲ್ಲರೆ ಇಲ್ಲ ಎಂದ ತಕ್ಷಣ ಅವರ ಮೇಲೆ ರೇಗಾಡುವುದು ಸೇರಿದಂತೆ ಅನೇಕ ರೀತಿಯ ದುರ್ವರ್ತನೆಗಳನ್ನು ತೋರುತ್ತಿದ್ದರು. ಇವೆಲ್ಲವುಗಳನ್ನು ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಪ್ರತ್ಯಕ್ಷವಾಗಿ ಕಂಡು ಅಮಾನತ್ತಿನ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.













