(ನ್ಯೂಸ್ ಕಡಬ) newskadaba.com, ಜು.14: ಬಲವಾದ ಗಾಳಿ ಹಾಗೂ ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಮಂಗಳೂರಿನ ಪಣಂಬೂರು ಅಂತಾರಾಷ್ಟ್ರೀಯ ಕಡಲತೀರದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಇದರಿಂದಾಗಿ ಕಡಲತೀರದ ಮರಳು ವೇಗವಾಗಿ ಕೊಚ್ಚಿಹೋಗುತ್ತಿದ್ದು, ಕರಾವಳಿ ಮೂಲಸೌಕರ್ಯಕ್ಕೆ ಧಕ್ಕೆಯುಂಟಾಗಿದೆ.
ಮುಖ್ಯ ಟಿಕೆಟ್ ಕೌಂಟರ್ ಮತ್ತು ಆಡಳಿತ ಕಚೇರಿಯ ಸಮೀಪವೇ ಕಡಲು ಕೊರೆತ ಉಂಟಾಗಿದ್ದು, ಕಡಲತೀರದಲ್ಲಿದ್ದ ಎರಡು ಬೃಹತ್ ಮರಗಳು ಧರೆಗುರುಳಿವೆ. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು ಸಮುದ್ರಕ್ಕಿಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಕೋಸ್ಟ್ ಗಾರ್ಡ್ ಕಚೇರಿ ಇರುವ ಭಾಗದಲ್ಲಿ ಮತ್ತಷ್ಟು ಹಾನಿಯಾಗದಂತೆ ತಡೆಯಲು ಅಧಿಕಾರಿಗಳು ತಾತ್ಕಾಲಿಕವಾಗಿ ಬೃಹತ್ ಬಂಡೆಗಲ್ಲುಗಳನ್ನು ಜೋಡಿಸಿ ತಡೆಗೋಡೆ ನಿರ್ಮಿಸಿದ್ದಾರೆ.
ಕಡಲತೀರದ ಹಲವು ಭಾಗಗಳಲ್ಲಿ ಶಾಶ್ವತ ತಡೆಗೋಡೆ ಇಲ್ಲದಿರುವುದರಿಂದ ಮರಳು ಸವೆತ ಹೆಚ್ಚಾಗುತ್ತಿದ್ದು, ಪ್ರವಾಸೋದ್ಯಮದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಶಾಶ್ವತ ಸಮುದ್ರ ಸವೆತ ವಿರೋಧಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.









