(ನ್ಯೂಸ್ ಕಡಬ) newskadaba.com, ಜು.13 :ತಮ್ಮ ಇಬ್ಬರು ಪುತ್ರಿಯರು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕಗೊಳ್ಳಲು ಅಧಿಕಾರ ದುರುಪಯೋಗಪಡಿಸಿಕೊಂಡು, ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಲು ಸಹಕರಿಸಿದ ಗಂಭೀರ ಆರೋಪ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಮೇಲಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹುದ್ದೆಗೆ 3ಬಿ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಪುತ್ರಿ ಸುಮಾ ಸಾಹುಕಾರ್, ಕುಟುಂಬದ ವಾರ್ಷಿಕ ಆದಾಯ ಕೇವಲ ₹40 ಸಾವಿರ ಎಂದು ಸುಳ್ಳು ಪ್ರಮಾಣಪತ್ರ ನೀಡಿದ್ದರು. ಆದರೆ, ಶಿವಶಂಕರಪ್ಪ ಅವರು 2019 ರಿಂದಲೇ ಆಯೋಗದ ಸದಸ್ಯರಾಗಿ ಸರ್ಕಾರದಿಂದ ವೇತನ ಪಡೆಯುತ್ತಿರುವುದರಿಂದ ಈ ಆದಾಯ ಮಾಹಿತಿ ಶುದ್ಧ ಸುಳ್ಳು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಆಯೋಗದ ಸಮಗ್ರತೆ ಕಾಯ್ದುಕೊಳ್ಳಲು ಮತ್ತು ನಿಷ್ಪಕ್ಷಪಾತ ತನಿಖೆ ಖಚಿತಪಡಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್‌ಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.









