(ನ್ಯೂಸ್ ಕಡಬ) newskadaba.com, ಜು.08 : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಿಮಂದರ್ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಹೈ-ವೋಲ್ಟೇಜ್ ಉಗ್ರ ನಿಗ್ರಹ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ದಟ್ಟವಾದ ತೋಟವೊಂದರಲ್ಲಿ ಅಡಗಿದ್ದ ಶಂಕಿತ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ.
ಐದು ದಿನಗಳ ಹಿಂದೆ ಸೈದ್‌ಪೋರಾದ ಛನ್ನಾಪೋರಾ ಪ್ರದೇಶದಲ್ಲಿ ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಮತ್ತು ಆತನ ಸಹಚರ ಲತೀಫ್ ಭಟ್ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ನಿರ್ಣಾಯಕ ಗುಪ್ತಚರ ಮಾಹಿತಿ ಆಧಾರದ ಮೇಲೆ ಸೇನೆ ರಂಗಕ್ಕಿಳಿದಿತ್ತು.
ಜಮ್ಮು-ಕಾಶ್ಮೀರ ಪೊಲೀಸ್ ರಾಷ್ಟ್ರಿಯ ರೈಫಲ್ಸ್ (RR) ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದವು. ಸೇನೆಯ ವಿಶೇಷ ಉಗ್ರ ನಿಗ್ರಹ ಘಟಕ ‘ವಿಕ್ಟರ್ ಫೋರ್ಸ್’ ಇಡೀ ತೋಟದ ಎಲ್ಲಾ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಿ, ಉಗ್ರರು ತಪ್ಪಿಸಿಕೊಳ್ಳದಂತೆ ಭದ್ರತಾ ವಲಯ ನಿರ್ಮಿಸಿತ್ತು. ರಾತ್ರಿ ಕಾರ್ಯಾಚರಣೆಗಾಗಿ ಇಡೀ ಪ್ರದೇಶದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು.
ಭದ್ರತಾ ಪಡೆಗಳು ಸುತ್ತುವರಿಯುತ್ತಿದ್ದಂತೆ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ನಡೆದ ತೀವ್ರ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಮೃತ ಉಗ್ರನ ಗುರುತನ್ನು ಅಧಿಕೃತವಾಗಿ ದೃಢೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಘಟನಾ ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ.









