(ನ್ಯೂಸ್ ಕಡಬ) newskadaba.com, ಜು.07 ಉಪ್ಪಿನಂಗಡಿ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ, 60 ವರ್ಷ ಹಳೆಯ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಳೆದೊಂದು ವರ್ಷದಿಂದ ಮೂಡುಬಿದಿರೆ ಕಡೆಯಿಂದ ಮೈಸೂರಿಗೆ ನೂರಾರು ಘನ ವಾಹನಗಳಲ್ಲಿ ಮಿತಿಮೀರಿ ಮಣ್ಣು ಸಾಗಿಸುತ್ತಿರುವುದು ಬಿರುಕಿಗೆ ಕಾರಣ ಎನ್ನಲಾಗಿದೆ.ಸೇತುವೆಯ ಪಿಲ್ಲರ್‌ಗಳ ಕಾಂಕ್ರೀಟ್ ಕಿತ್ತುಹೋಗಿ ಒಳಗಿನ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಜೊತೆಗೆ, ಸ್ಲ್ಯಾಬ್‌ಗಳಲ್ಲಿ ಅಶ್ವತ್ಥ ಗಿಡಗಳು ಬೆಳೆದು ಬೇರು ಬಿಡುತ್ತಿವೆ.
ಸೇತುವೆಯ ಮೇಲಿನ ಮಣ್ಣು-ಕಸವನ್ನು ಇಲಾಖೆ ಸ್ವಚ್ಛಗೊಳಿಸುತ್ತಿಲ್ಲ. ಪ್ರಸ್ತುತ ಸ್ಥಳೀಯ ಸ್ವಯಂಸೇವಕರೇ ಶ್ರಮದಾನದ ಮೂಲಕ ಮಳೆನೀರು ಸರಾಗವಾಗಿ ಹರಿಯಲು ದಾರಿ ಮಾಡುತ್ತಿದ್ದಾರೆ.”ಇಳಂತಿಲ ಭಾಗದ ಮೊದಲ ಸ್ಲ್ಯಾಬ್‌ನಲ್ಲೇ ಬಿರುಕು ಕಾಣಿಸಿದೆ. ಈ ಐತಿಹಾಸಿಕ ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕಾಲಕಾಲಕ್ಕೆ ಸೂಕ್ತ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಬೇಕು.”
– ಯು.ಟಿ. ಫಯಾಜ್ (ಸ್ಥಳೀಯ ಸಮಾಜ ಸೇವಕ) & ತಿಮ್ಮಪ್ಪ ಗೌಡ (ಗ್ರಾ.ಪಂ. ಮಾಜಿ ಅಧ್ಯಕ್ಷರು)
ದೊಡ್ಡ ಮಟ್ಟದ ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.









