ಮೊಬೈಲ್ ಟಾರ್ಚ್ ಬೆಳಕಿನಲ್ಲೇ 90 ಕಿ.ಮೀ ಸಂಚರಿಸಿದ ಕೆಕೆಆರ್‌ಟಿಸಿ ಬಸ್: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ!



(ನ್ಯೂಸ್‌ ಕಡಬ) newskadaba.com,ಜು.06  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದ ಬಸ್‌ವೊಂದರ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದರೂ, ಕಂಡಕ್ಟರ್ ಮೊಬೈಲ್ ಫೋನ್ ಟಾರ್ಚ್ ಹಿಡಿದು ಚಾಲಕನಿಗೆ ದಾರಿ ತೋರಿಸುತ್ತಾ ಬಸ್ ಚಲಾಯಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.







ಕಲಬುರಗಿಯಿಂದ ಚಿಂಚೋಳಿಗೆ (ಸುಮಾರು 90 ಕಿ.ಮೀ) ಹೊರಟಿದ್ದ ದಿನದ ಕೊನೆಯ ರಾತ್ರಿ ಪಾಳೆಯದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕತ್ತಲೆಯ ರಸ್ತೆಯಲ್ಲಿ ಹೆಡ್‌ಲೈಟ್‌ ಇಲ್ಲದೆ ಪ್ರಯಾಣಿಕರ ಜೀವವನ್ನು ಕೈಯಲ್ಲಿ ಹಿಡಿದು ಸಾಗಿಸಲಾಗುತ್ತಿತ್ತು.ಮೂಲಗಳ ಪ್ರಕಾರ, ಈ ಬಸ್‌ನ ಹೆಡ್‌ಲೈಟ್‌ ಕೆಟ್ಟು ಹಲವು ದಿನಗಳಾಗಿದ್ದರೂ ಡಿಪೋ ಅಧಿಕಾರಿಗಳು ದುರಸ್ತಿ ಮಾಡಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದಿನವೂ ಮೊಬೈಲ್ ಟಾರ್ಚ್ ನಂಬಿಕೊಂಡೇ ಈ ಬಸ್ ಸಂಚರಿಸುತ್ತಿತ್ತು ಎನ್ನಲಾಗಿದೆ.






ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ಜೆಡಿಎಸ್, ಇದು “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತದ ದುಸ್ಥಿತಿ ಮತ್ತು ವೈಫಲ್ಯಕ್ಕೆ ಹಿಡಿದ ಕೈಗನ್ನಡಿ” ಎಂದು ಕಿಡಿಕಾರಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಹಳೇ ಬಸ್‌ಗಳನ್ನು ನೀಡಿ ಮುಗ್ಧ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆರೋಪಿಸಿ, ಸಾರಿಗೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

error: Content is protected !!
Scroll to Top