(ನ್ಯೂಸ್ ಕಡಬ) newskadaba.com, ಜು.04:ಕಳೆದ ಒಂದು ದಶಕದಲ್ಲಿ ಭಾರತೀಯ ರೈಲ್ವೆಯು ಕೇವಲ ಸಾರಿಗೆ ಇಲಾಖೆಯಾಗಿ ಉಳಿಯದೆ, ದೇಶದ ಆರ್ಥಿಕ ಪ್ರಗತಿಯ ಪ್ರಮುಖ ಎಂಜಿನ್ ಆಗಿ ರೂಪಾಂತರಗೊಂಡಿದೆ. 2014ಕ್ಕೂ ಮುನ್ನ ಹೂಡಿಕೆಯ ಕೊರತೆ ಮತ್ತು ನಿಧಾನಗತಿಯ ಯೋಜನೆಗಳಿಂದ ಕೃಶವಾಗಿದ್ದ ರೈಲ್ವೆ ವಲಯ, ಇಂದು ಆಧುನೀಕರಣ ಹಾಗೂ ಸುರಕ್ಷತೆಗೆ ಆದ್ಯತೆ ನೀಡಿ ಜಾಗತಿಕ ಮಟ್ಟದ ಮೂಲಸೌಕರ್ಯದತ್ತ ಹೆಜ್ಜೆ ಇಟ್ಟಿದೆ.
2013-14ರಲ್ಲಿ ಭಾರತೀಯ ರೈಲ್ವೆಯ ವಾರ್ಷಿಕ ಬಂಡವಾಳ ವೆಚ್ಚ ಸುಮಾರು ₹28,000 ಕೋಟಿಯಷ್ಟಿದ್ದರೆ, 2025-26ರ ವೇಳೆಗೆ ಇದು ದಾಖಲೆಯ ₹2.5 ಲಕ್ಷ ಕೋಟಿಗೆ ತಲುಪಿದೆ.2014ಕ್ಕೂ ಮುನ್ನ ವರ್ಷಕ್ಕೆ ಸರಾಸರಿ 1500 ಕಿ.ಮೀ. ಹೊಸ ಹಳಿ ನಿರ್ಮಾಣ ಮತ್ತು ಡಬ್ಲಿಂಗ್ ಕೆಲಸ ನಡೆಯುತ್ತಿತ್ತು. 2004-2014ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 170 ರೈಲು ಅಪಘಾತಗಳು ಸಂಭವಿಸುತ್ತಿದ್ದವು. ಆದರೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ 10-20ಕ್ಕೆ ಕುಸಿದಿದೆ.2014ರಲ್ಲಿ ಕೇವಲ 21,000 ಕಿ.ಮೀ. ಮಾತ್ರ ವಿದ್ಯುದೀಕೃತವಾಗಿದ್ದ ಬ್ರಾಡ್ಗೇಜ್ ಜಾಲ, 2025ರ ವೇಳೆಗೆ 99% ಕ್ಕೂ ಹೆಚ್ಚು ವಿದ್ಯುದೀಕರಣಗೊಂಡು ವಿಶ್ವದ ಅತಿದೊಡ್ಡ ಹಸಿರು ರೈಲ್ವೆ ಜಾಲಗಳಲ್ಲಿ ಒಂದಾಗಿದೆ.
ಆನ್ಲೈನ್ ಟಿಕೆಟ್ ವ್ಯವಸ್ಥೆ ಮೇಲ್ದರ್ಜೆಗೆ, ಜಿಪಿಎಸ್ ಆಧಾರಿತ ರಿಯಲ್-ಟೈಮ್ ಟ್ರ್ಯಾಕಿಂಗ್, ಹಳಿಗಳ ಪರಿಶೀಲನೆಗೆ ಡ್ರೋನ್ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆ ಹಾಗೂ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲಾಗಿದೆ.ಕಲ್ಲಿದ್ದಲು, ಉಕ್ಕು, ಸಿಮೆಂಟ್ ಸಾಗಣೆ ವೇಗವಾಗಿ ನಡೆಯುತ್ತಿರುವುದರಿಂದ ರೈಲ್ವೆ ಆದಾಯ ಹೆಚ್ಚಿ, ದೇಶದ ಲಾಜಿಸ್ಟಿಕ್ಸ್ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ.









