ಶಾಲಾ ಬಸ್ ಹತ್ತಿದಾಗಿನಿಂದ ಮನೆ ತಲುಪುವವರೆಗೆ ಮಕ್ಕಳ ಸುರಕ್ಷತೆ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಮಹತ್ವದ ತೀರ್ಪು



(ನ್ಯೂಸ್‌ ಕಡಬ) newskadaba.com, ಜು.03 : ಮಕ್ಕಳು ಶಾಲಾ ಆವರಣದಲ್ಲಿ ಮಾತ್ರವಲ್ಲ, ಶಾಲಾ ಬಸ್ ಹತ್ತಿದಾಗಿನಿಂದ ಕೊನೆಯ ಸ್ಟಾಪ್‌ನಲ್ಲಿ ಇಳಿದು ಮನೆ ತಲುಪುವವರೆಗೆ ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.







“ಮಕ್ಕಳಿಗೆ ಬಸ್ ಸೌಕರ್ಯ ನೀಡಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಶಾಸನದ ಅಡಿ ಕಡ್ಡಾಯಗೊಳಿಸಲಾದ ಗಂಭೀರ ಬಾಧ್ಯತೆಯಾಗಿದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.






ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಖಾಸಗಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ 2025ರ ಆಗಸ್ಟ್ 1ರಂದು ಶಾಲಾ ಬಸ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಇತರ ವಿದ್ಯಾರ್ಥಿಗಳು ಬಣ್ಣದ ಬೆಳಕು ಸೂಸುವ ಪಟಾಕಿ ಸಿಡಿಸಿದ್ದರು. ಇದರ ಕಿಡಿ ತಗುಲಿ ಮಗು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ದೇಹದ ಶೇ. 40ರಷ್ಟು ಅಂಗವಿಕಲತೆ ಉಂಟಾಗಿತ್ತು.

ಈ ಸಂಬಂಧ ಶಾಲಾ ಮಂಡಳಿ ವಿರುದ್ಧ ದಾಖಲಾಗಿದ್ದ ಬಿಎನ್‌ಎಸ್ (BNS) ಕಲಂ 125(ಎ) ಅಡಿಯ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಬಸ್‌ನಲ್ಲಿ ಅಟೆಂಡರ್ ಇದ್ದರೇ? ಸಿಸಿಟಿವಿ ಕಾರ್ಯನಿರ್ವಹಿಸುತ್ತಿತ್ತೇ? ಅಪಾಯಕಾರಿ ವಸ್ತುಗಳನ್ನು ಮಕ್ಕಳು ಒಳಗೆ ತಂದಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ ಎಂದು ಕೋರ್ಟ್ ತಿಳಿಸಿದೆ.

error: Content is protected !!
Scroll to Top