(ನ್ಯೂಸ್ ಕಡಬ) newskadaba.com, ಜು.03 ಜಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಯುವಕ ಮತ್ತು ಯುವತಿಯೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿ, ಅದು ಹಲ್ಲೆಗೆ ತಿರುಗಿದ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪರಸ್ಪರ ದೂರು-ಪ್ರತಿದೂರು ದಾಖಲಾಗಿವೆ.
ಜೂನ್ 30ರಂದು ಜಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಈ ಘಟನೆ ನಡೆದಿದೆ.ಜಯನಗರ ನಿವಾಸಿ ಭವಿಷ್ ಅವರು ತಾನು ಸ್ನೇಹಿತೆಯೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಮೂವರು ಸ್ಥಳೀಯರು ಬಂದು ನಿಂದಿಸಿ, ಮೋಟಾರ್ಸೈಕಲ್ ತಡೆದು ಕೀ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸ್ಥಳೀಯ ನಿವಾಸಿ ವಸಂತ ಎಂಬುವವರು, ಯುವಕ-ಯುವತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದನ್ನು ಪ್ರಶ್ನಿಸಿದಾಗ, ಯುವಕನೇ ಮೊದಲು ತಮ್ಮವರ ಮೇಲೆ ಹಲ್ಲೆ ನಡೆಸಿ ತುಟಿಗೆ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರುಗಳು ಬಂದಿದ್ದು, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.









