(ನ್ಯೂಸ್ ಕಡಬ) newskadaba.com, ಜು.02: ಚಲಿಸುವ ಬಸ್ಸಿನ ಕಿಟಕಿಯಿಂದ ಹೊರಗೆ ತಲೆಹಾಕಿದ ಪರಿಣಾಮ, ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಹೊರವಲಯದಲ್ಲಿ ಸಂಭವಿಸಿದೆ.ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕೀರೇಶ (17).
ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ಸಿನ ಹಿಂಬದಿ ಸೀಟಿನಲ್ಲಿ ಫಕೀರೇಶ ಕುಳಿತಿದ್ದ. ಬಸ್ ಚಲಿಸುತ್ತಿದ್ದಾಗ ಗುಟ್ಕಾ ಉಗುಳಲು ಆತ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿದ್ದಾನೆ. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಯುವಕನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಯುವಕನ ಶಿರಚ್ಛೇದವಾಗಿದ್ದು, ದೇಹದಿಂದ ರುಂಡ ಬೇರ್ಪಟ್ಟು ರಸ್ತೆಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯಲ್ಲೇ ನೇತಾಡುತ್ತಿದ್ದ ಭೀಕರ ದೃಶ್ಯ ಸಹ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.ಸದ್ಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.









