ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ



(ನ್ಯೂಸ್ ಕಡಬ) newskadaba.com ಜೂ. 30. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆಯನ್ನು ಆಯೋಜಿಸಲಾಯಿತು.







ಖಗೋಳಶಾಸ್ತ್ರಜ್ಞ ಡಾ. ರಮೇಶ್ ಎಂ. ಭಟ್ ಉದ್ಘಾಟಿಸಿ ಮಾತನಾಡಿ, ಕ್ಷುದ್ರಗ್ರಹಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದ್ದು, ಅವುಗಳ ವೈಜ್ಞಾನಿಕ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಕ್ಷುದ್ರಗ್ರಹಗಳ ಉಗಮ, ರಾಸಾಯನಿಕ ಅಂಶಗಳು, ಕುಬ್ಜ ಗ್ರಹಗಳು, ಉಲ್ಕೆಗಳು ಮತ್ತು ಧೂಮಕೇತುಗಳು ಸೌರಮಂಡಲದಲ್ಲಿ ಚಲಿಸುವ ಪಥಗಳ ಬಗ್ಗೆ ವಿವರಿಸಿದರು. ವಿವಿಧ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳು ಕ್ಷುದ್ರಗ್ರಹಗಳ ಅಧ್ಯಯನಕ್ಕಾಗಿ ಕೈಗೊಂಡಿರುವ ಸಂಶೋಧನಾ ಯೋಜನೆಗಳು, ಉಪಗ್ರಹಾಧಾರಿತ ಪ್ರಯೋಗಗಳು ಹಾಗೂ ಭೂಮಿಗೆ ಸಂಭವಿಸಬಹುದಾದ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯ ಅಪಾಯವನ್ನು ತಡೆಗಟ್ಟಲು ಅಭಿವೃದ್ಧಿಪಡಿಸಲಾಗುತ್ತಿರುವ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.






ಕೇಂದ್ರದ ವೈಜ್ಞಾನಿಕ ಅಧಿಕಾರಿ ವಿಶ್ವೇಶ್ ಭಟ್ ಅವರು ಖಗೋಳ ಸಂಬಂಧಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಇನ್ನೊವೇಶನ್ ಹಬ್‍ ನ ಮೆಂಟರ್‍ ಗಳಾದ ಹೃತಿಕ್ ಹಾಗೂ ಶ್ರೀಶಾಂತ್ ಶೆಟ್ಟಿ ಅವರು ಪ್ರಾಜೆಕ್ಟ್‍’ಗಳ ತಯಾರಿಕೆ ಕುರಿತು ಮಾಹಿತಿ ನೀಡಿ, ಕೆಲವು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ತಾರಾಲಯದಲ್ಲಿ ಲೈವ್ ಆಸ್ಟ್ರೋನಮಿ ಶೋ ಹಾಗೂ ಟು ಪೀಸಸ್ ಆಫ್ ಗ್ಲಾಸಸ್ ಎಂಬ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ಪ್ರೌಢಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಸ್ವಾಗತಿಸಿ, ಚಂಚಲಾಕ್ಷಿ ವಂದಿಸಿದರು. ಟೆಕ್ನಿಶಿಯನ್ ವಂದನಾ ನಿರೂಪಿಸಿದರು.

error: Content is protected !!
Scroll to Top