(ನ್ಯೂಸ್ ಕಡಬ) newskadaba.com ಜೂ. 27. ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮತದಾರರು ಸಲ್ಲಿಸಬಹುದಾದ 12 ಮಾನ್ಯ ದಾಖಲೆಗಳಲ್ಲಿ ಒಂದಾಗಿ ಭಾರತೀಯ ಪಾಸ್‌ಪೋರ್ಟ್ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಾಸ್ ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಪಾಸ್ ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಿಂದ ಉಂಟಾಗಿದ್ದ ವಿವಾದದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
ಬಿಹಾರ ಮತ್ತು ಅಸ್ಸಾಂನ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮತ್ತು ನಂತರದ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಗಳಲ್ಲೂ ಪಾಸ್ ಪೋರ್ಟ್‌ಗಳನ್ನು ಸ್ವೀಕರಿಸಲಾಗಿತ್ತು ಹಾಗೂ ಅವು ಈಗಲೂ 12 ಅನುಮತಿಸಲಾದ ದಾಖಲೆಗಳ ಪಟ್ಟಿಯಲ್ಲಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.









