(ನ್ಯೂಸ್ ಕಡಬ) newskadaba.com, ಜೂ.22 ನೀಟ್ -ಯುಜಿ ಮರು ಪರೀಕ್ಷೆ 2026 ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ಹೇರಿದ್ದ ನಿಷೇಧವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆರವುಗೊಳಿಸಿದೆ.
ಇಂದಿನಿಂದ ಭಾರತದಲ್ಲಿ ಟೆಲಿಗ್ರಾಮ್ ಮೇಲಿನ ನಿಷೇಧ ಹಿಂಪಡೆಯಲಾಗಿದ್ದು, ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ‘ಮೆಸೇಜ್-ಎಡಿಟಿಂಗ್’ ಮೇಲಿನ ನಿರ್ಬಂಧವನ್ನು ಜೂನ್ 30 ರವರೆಗೆ ಮುಂದುವರಿಸಲು ಸರ್ಕಾರ ಆದೇಶಿಸಿದೆ.ಸದ್ಯ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಆ್ಯಪ್ ಇನ್ನು ಲಭ್ಯವಾಗಿಲ್ಲದಿದ್ದರೂ, ಇಂಟರ್ನೆಟ್ ಸೇವಾ ಪೂರೈಕೆದಾರರು ಹಂತಹಂತವಾಗಿ ನಿಷೇಧವನ್ನು ರದ್ದುಗೊಳಿಸುತ್ತಿರುವುದರಿಂದ ಶೀಘ್ರದಲ್ಲೇ ಇದು ದೇಶದ ಬಳಕೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿರಲಿದೆ.
ಇತ್ತೀಚೆಗೆ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಸೋರಿಕೆಯಾಗಿ, ಕಾನೂನುಬಾಹಿರವಾಗಿ ಮಾರಾಟವಾಗುತ್ತಿರುವುದು ಪತ್ತೆಯಾಗಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಟೆಲಿಗ್ರಾಮ್ ಪಾತ್ರದ ಕಾರಣದಿಂದ ಸರ್ಕಾರ ಈ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು.









