ನೇತ್ರಾವತಿ ನದಿಯ ನಡುವೆ ಹಚ್ಚ ಹಸಿರಿನ ಬೆಟ್ಟದ ಮೇಲಿದೆ ಈ ಸುಂದರ ಕ್ಷೇತ್ರ ಇದರ ಇತಿಹಾಸ ನಿಮಗೊತ್ತೇ?



(ನ್ಯೂಸ್‌ ಕಡಬ) newskadaba.com,ಜೂ.20 : 3 ಸುತ್ತಲೂ ಹರಿಯುವ ನೇತ್ರಾವತಿ ನದಿಯ ನಡುವೆ, ಹಚ್ಚ ಹಸಿರಿನ ಬೆಟ್ಟದ ತುದಿಯಲ್ಲಿ ಕಂಗೊಳಿಸುತ್ತಿರುವ ಮಂಗಳೂರು ತಾಲೂಕಿನ ಇನ್ನೋಳಿ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ಕ್ಷೇತ್ರ ಭಕ್ತರು ಹಾಗೂ ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಧಾರ್ಮಿಕ ಮಹತ್ವದೊಂದಿಗೆ ನೈಸರ್ಗಿಕ ಸೌಂದರ್ಯವನ್ನೂ ಹೊಂದಿರುವ ಈ ಕ್ಷೇತ್ರಕ್ಕೆ ಸುಮಾರು 2,000 ವರ್ಷಗಳ ಸುದೀರ್ಘ ಇತಿಹಾಸವಿದೆ.







ಟಿಪ್ಪು ಸುಲ್ತಾನನ ಕಾಲದ ಫಿರಂಗಿ ದಾಳಿಯಿಂದ ಈ ಕ್ಷೇತ್ರ ಹಾನಿಗೊಳಗಾಗಿತ್ತು. ಫಿರಂಗಿ ಸಿಡಿಸಿದ ಆ ಸ್ಥಳವೇ ಇಂದು ‘ಪರಂಗಿಪೇಟೆ’ ಎಂದು ಪ್ರಸಿದ್ಧಿಯಾಗಿದೆ.ದೀರ್ಘಕಾಲ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ದೇವಸ್ಥಾನವನ್ನು ಗ್ರಾಮಸ್ಥರು ಮತ್ತು ಭಕ್ತರು ಒಗ್ಗೂಡಿ 1999ರಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿಸಿ, 2007ರಲ್ಲಿ ಹೊಸ ವೈಭವದೊಂದಿಗೆ ಪುನರುಜ್ಜೀವನಗೊಳಿಸಿದರು.






ಇಲ್ಲಿ ಮಹಾಶಿವ ಮತ್ತು ದುರ್ಗಾಪರಮೇಶ್ವರಿ ದೇವಿಯನ್ನು ಪ್ರಧಾನವಾಗಿ ಆರಾಧಿಸಲಾಗುತ್ತದೆ. ಸಂಜೆಯ ವೇಳೆ ಬೆಟ್ಟದ ಮೇಲಿಂದ ಕಾಣುವ ಸೂರ್ಯಾಸ್ತದ ಮನಮೋಹಕ ದೃಶ್ಯ ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.ಮಂಗಳೂರಿನಿಂದ ಕೊಣಾಜೆ ಮಾರ್ಗವಾಗಿ ಇದನ್ನು ತಲುಪಬಹುದು. ರಾಷ್ಟ್ರೀಯ ಹೆದ್ದಾರಿ-75ರ ಅಡ್ಯಾರು ಭಾಗದ ಹೊಸ ಸೇತುವೆಯು ಈ ಕ್ಷೇತ್ರಕ್ಕೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಿದೆ.ದೈವಿಕ ಸನ್ನಿಧಿ ಹಾಗೂ ಪ್ರಕೃತಿಯ ಸಮ್ಮಿಲನವನ್ನು ಬಯಸುವವರು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಅಪರೂಪದ ತಾಣ ಇದಾಗಿದೆ.

error: Content is protected !!
Scroll to Top