(ನ್ಯೂಸ್ ಕಡಬ) newskadaba.com ಜೂ.19 ಮಂಗಳೂರು: ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪದ ಹಡಗುಗಳ ನಿರ್ವಹಣೆಗಾಗಿ ಕಾರ್ಗೊ ಮತ್ತು ಕ್ರೂಸ್ ಟರ್ಮಿನಲ್ ಒಳಗೊಂಡ ಡೆಡಿಕೇಟೆಡ್ ಜೆಟ್ಟಿ ನಿರ್ಮಾಣಕ್ಕೆ ರಾಜ್ಯಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕಳೆದ 3 ವರ್ಷಗಳಿಂದ ಬಾಕಿ ಉಳಿದಿದ್ದ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿದ್ದು, ಆಗಸ್ಟ್‌ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ‘ಸಾಗರಮಾಲ’ ಯೋಜನೆಯಡಿ ಮೊದಲ ಹಂತದಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣವಾಗಲಿದೆ.ಬೆಂಗಳೂರಿನ ರಾಮಲಿಂಗಂ ಕನ್ಸ್‌ಟ್ರಕ್ಷನ್ ಸಂಸ್ಥೆಯು 30 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ರಾಜ್ಯ ಸರ್ಕಾರವು ಜೆಟ್ಟಿ ನಿರ್ಮಿಸಿದ ಬಳಿಕ ಅದರ ಸಂಪೂರ್ಣ ನಿರ್ವಹಣೆಯನ್ನು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಹಸ್ತಾಂತರಿಸಲಿದೆ.ಉತ್ತರ ದಕ್ಕೆಯಲ್ಲಿ 303.60 ಮೀಟರ್ ಉದ್ದದ ಕಾರ್ಗೊ ಬರ್ಥ್ ಹಾಗೂ 76 ಮೀಟರ್ ಉದ್ದದ ಪ್ಯಾಸೆಂಜರ್ ಟರ್ಮಿನಲ್ ನಿರ್ಮಾಣವಾಗಲಿದ್ದು, ಪ್ರಯಾಣಿಕರಿಗಾಗಿ ಅತ್ಯಾಧುನಿಕ ಲಾಂಜ್, ಭದ್ರತಾ ಸ್ಕ್ಯಾನರ್ ಹಾಗೂ ಕಚೇರಿ ಸೌಲಭ್ಯಗಳು ಇರಲಿವೆ.









