(ನ್ಯೂಸ್ ಕಡಬ) newskadaba.com, ಜೂ.11 ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಮರಣ ಪ್ರಮಾಣವನ್ನು ತಗ್ಗಿಸಲು ಎರಡು ಪ್ರಮುಖ ಸುರಕ್ಷತಾ ಯೋಜನೆಗಳನ್ನು ಘೋಷಿಸಿದೆ. ರಸ್ತೆ ಅಪಘಾತಕ್ಕೊಳಗಾದ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಸಾರ್ವಜನಿಕರನ್ನು ‘ರಾಹವೀರ್’ ಎಂದು ಗುರುತಿಸಿ, ಅವರಿಗೆ ಕೇಂದ್ರ ಸರ್ಕಾರದಿಂದ 25,000 ರೂಪಾಯಿ ನಗದು ಬಹುಮಾನ ನೀಡಲಾಗುವುದು.
ಅಪಘಾತಕ್ಕೊಳಗಾದವರ ಜೀವ ಉಳಿಸಲು ಮೊದಲ 7 ದಿನಗಳ ತುರ್ತು ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ರಾಷ್ಟ್ರೀಯ ಹೆದ್ದಾರಿ ಅಥವಾ ನಗರದ ಯಾವುದೇ ರಸ್ತೆಯಲ್ಲಿ ಅಪಘಾತ ನಡೆದರೂ, ಗಾಯಾಳುಗಳನ್ನು ದಾಖಲಿಸಿದ ಆಸ್ಪತ್ರೆಗೆ ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಬಿಲ್ ಅನ್ನು ಸರ್ಕಾರ ನೇರವಾಗಿ ಪಾವತಿಸಲಿದೆ.
ಈ ಮಹತ್ವದ ಜೀವ ರಕ್ಷಣಾ ಅಭಿಯಾನಕ್ಕೆ ಖಾಸಗಿ ವಲಯದ ‘ರ್ಯಾಪಿಡೋ’ ಸಂಸ್ಥೆ ಕೂಡ ಕೈಜೋಡಿಸಿದೆ.ಏಮ್ಸ್ ವೈದ್ಯರ ಸಮಿತಿ ವರದಿ ಅನ್ವಯ, ಸಾರ್ವಜನಿಕರು ತಕ್ಷಣ ಸ್ಪಂದಿಸಿದರೆ ದೇಶದಲ್ಲಿ ವಾರ್ಷಿಕವಾಗಿ ಸುಮಾರು 50,000 ಜೀವಗಳನ್ನು ರಕ್ಷಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.









