ಉದ್ಯೋಗಾಕಾಂಕ್ಷಿಗಳಿಗೆ ಕೋಟ್ಯಂತರ ರೂ. ವಂಚಿಸಿದ್ದ ತಂದೆ- ಮಗಳು ಸಿಸಿಬಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಜೂ. 08. ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ರೂ. 5.3 ಕೋಟಿಗೂ ಹೆಚ್ಚು ಹಣ ವಂಚಿಸಿದ ತಂದೆ ಮಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 

ವರದಿಯ ಪ್ರಕಾರ, ಆರೋಪಿಗಳು ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದರು. ಅಭ್ಯರ್ಥಿಗಳನ್ನು ಸೆಳೆಯಲು ಬೆಂಗಳೂರು, ಮುಂಬೈ, ಕೋಲ್ಕತ್ತಾಗಳಲ್ಲಿ ನಕಲಿ ತರಬೇತಿ ಕೇಂದ್ರ ತೆರೆದು, ನಾಲ್ಕು ತಿಂಗಳ ನಕಲಿ ಸಂಬಳವನ್ನೂ ನೀಡಿದ್ದರು.

ಉತ್ತರ ಕರ್ನಾಟಕದ 40ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಂದ ತಲಾ ₹5 ರಿಂದ ₹10 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿದೆ. ವಿಜಯಪುರದ ಒಬ್ಬರೇ ದೂರುದಾರರಿಗೆ ₹2.5 ಕೋಟಿಗೂ ಹೆಚ್ಚು ವಂಚಿಸಲಾಗಿದೆ.2023 ರಿಂದ 2025 ಅವಧಿಯಲ್ಲಿ ಆನ್ಲೈನ್ ಮೂಲಕ ವಹಿವಾಟುಗಳು ನಡೆದಿದ್ದು, ಸಿಸಿಬಿ ಪೊಲೀಸರು ಜೂನ್ 4 ರಂದು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Scroll to Top