(ನ್ಯೂಸ್ ಕಡಬ) newskadaba.com ಜೂ. 06: ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (KSP) ಖಾಲಿ ಇರುವ 3,395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಮಿಕ್ಕುಳಿದ ವೃಂದ) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ.
ಈ ಬಾರಿಯ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಭಾರಿ ಸಡಿಲಿಕೆ ನೀಡಿರುವುದು ವಿಶೇಷವಾಗಿದೆ.
ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಜೂನ್ 08, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 03, 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 04, 2026
ಲಿಖಿತ ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 02, 2026 (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ)
ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ
ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ (PUC) / 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ (ರಾಜ್ಯ ಮಂಡಳಿ, CBSE, ICSE, NIOS). ಇದರೊಂದಿಗೆ 2 ವರ್ಷದ ಐಟಿಐ (ITI) ಅಥವಾ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳೂ ಸಹ ನಿಬಂಧನೆಗಳಿಗೊಳಪಟ್ಟು ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 37,500 ರಿಂದ ರೂ. 76,100/- ವರೆಗೆ ಆಕರ್ಷಕ ವೇತನ ಶ್ರೇಣಿ ಇರಲಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
ಸಾಮಾನ್ಯ ವರ್ಗ (GM) 33 ವರ್ಷಗಳು
SC / ST / ಹಿಂದುಳಿದ ವರ್ಗಗಳು (2A, 2B, 3A, 3B) 35 ವರ್ಷಗಳು
ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳು 38 ವರ್ಷಗಳು
ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಲಿಖಿತ ಪರೀಕ್ಷೆ: 100 ಅಂಕಗಳ ವಸ್ತುನಿಷ್ಠ (Objective Type) ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ.
ದೈಹಿಕ ಸಹಿಷ್ಣುತೆ ಮತ್ತು ಪ್ರಮಾಣಿತ ಪರೀಕ್ಷೆ (ET & PST): ಓಟ, ಉದ್ದ ಜಿಗಿತ/ಎತ್ತರ ಜಿಗಿತ ಮತ್ತು ಗುಂಡು ಎಸೆತ ಸ್ಪರ್ಧೆಗಳು.
ವೈದ್ಯಕೀಯ ಪರೀಕ್ಷೆ: ಲಿಖಿತ ಮತ್ತು ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ವೈದ್ಯಕೀಯ ತಪಾಸಣೆ ಇರಲಿದೆ.
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳು (GM, 2A, 2B, 3A, 3B): ರೂ. 750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 (SC/ST/Cat-I): ರೂ. 500/-
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಅಥವಾ https://ksp-recruitment.in/ ಗೆ ಭೇಟಿ ನೀಡಿ ಜುಲೈ 3ರ ಒಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.









