ಮೆಸ್ಕಾಂ ವ್ಯಾಪ್ತಿಯಲ್ಲಿ ವರುಣನ ಆರ್ಭಟ



(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 06. ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಮಳೆ ಹಾಗೂ ಭಾರಿ ಬಿರುಗಾಳಿಯ ಮುನ್ಸೂಚನೆಯಿಂದಾಗಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ವ್ಯಾಪ್ತಿಯಲ್ಲಿ ವ್ಯಾಪಕ ಅಪಾರ ಹಾನಿ ಸಂಭವಿಸಿದ್ದು, ಅಂದಾಜು 11.73 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟವಾಗಿರುವ ಕುರಿತು ವರದಿಯಾಗಿದೆ. ಏಪ್ರಿಲ್ 1 ರಿಂದ ಜೂನ್ 1 ರ ವರೆಗಿನ ಈ ಅವಧಿಯಲ್ಲಿ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿದ್ಯುತ್ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ.







 

ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಆರ್ಥಿಕ ನಷ್ಟ ಅನುಭವಿಸಿದ್ದು, ₹321.40 ಲಕ್ಷ ಮೌಲ್ಯದ ಆಸ್ತಿ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಸುಮಾರು 318.66 ಲಕ್ಷ ರೂ. ನಷ್ಟ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 312 ಲಕ್ಷ ಮೌಲ್ಯದ ಮೂಲಸೌಕರ್ಯಗಳು ಹಾನಿಗೊಳಗಾದರೆ, ಉಡುಪಿ ಜಿಲ್ಲೆಯಲ್ಲಿ ₹221.62 ಲಕ್ಷ ಆರ್ಥಿಕ ನಷ್ಟ ಸಂಭವಿಸಿದೆ.






ಈ ಅವಧಿಯಲ್ಲಿ ಒಟ್ಟು 8,147 ವಿದ್ಯುತ್ ಕಂಬಗಳು ನೆಲಸಮವಾಗಿವೆ. ಟ್ರಾನ್ಸ್‌ಫಾರ್ಮರ್‌ಗಳ ಪೈಕಿ ದಕ್ಷಿಣ ಕನ್ನಡದಲ್ಲಿ 12 ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ 17 ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಹಾನಿಗೊಳಗಾಗಿವೆ ಎಂದು ಕಂಪನಿ ವರದಿ ಮಾಡಿದೆ.

 

ಹವಾಮಾನ ವೈಪರೀತ್ಯದಿಂದಾಗಿ ಭಾರಿ ಹಾನಿ ಸಂಭವಿಸಿದ್ದರೂ, ಮೆಸ್ಕಾಂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಹಾನಿಗೊಳಗಾದ ಎಲ್ಲಾ 8,147 ವಿದ್ಯುತ್ ಕಂಬಗಳನ್ನು ಈಗಾಗಲೇ ಬದಲಾಯಿಸಲಾಗಿದ್ದು, ವಿದ್ಯುತ್ ಮಾರ್ಗ ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಪೀಡಿತ ಎಲ್ಲಾ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಸರಬರಾಜನ್ನು ಯಶಸ್ವಿಯಾಗಿ ಪುನಃಸ್ಥಾಪಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top