(ನ್ಯೂಸ್ ಕಡಬ) newskadaba.com ಕಡಬ, ಜೂ.02. ತಾಲೂಕು ಕೇಂದ್ರವಾಗಿ ರೂಪಗೊಂಡ ಬಳಿಕ ಕಡಬ ತಾಲೂಕಿನಲ್ಲಿ ನ್ಯಾಯಾಲಯ ಪ್ರಾರಂಭಿಸಬೇಕು ಎನ್ನುವ ಈ ಭಾಗದ ಬಹು ದಿನಗಳ ಬೇಡಿಕೆ ಈಡೇರಿದ್ದು, ಕಡಬದ ಗಣೇಶ್ ಬಿಲ್ಡಿಂಗ್‌ನಲ್ಲಿ ಖಾಸಗಿ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ಸೋಮವಾರದಂದು ನ್ಯಾಯಾಲಯ ಪ್ರಾರಂಭಗೊಂಡಿತು.
ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ದೀಪ ಬೆಳಗಿಸುವ ಮೂಲಕ ಕಡಬ ತಾಲೂಕಿನ ನ್ಯಾಯಾಲಯವನ್ನು ಉದ್ಘಾಟಿಸಿದರು.
ನೂತನ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ, ನ್ಯಾಯಾಲಯ ಪ್ರಾರಂಭಿಸಲು ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ನ್ಯಾಯಲಯವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಕಲಾಪ ನಡೆಯಲಿದ್ದು, ನ್ಯಾಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ದೃಷ್ಠಿಯಿಂದ ಕಡಬ ತಾಲೂಕು ಕಚೇರಿಯ ಬಳಿ 3 ಎಕ್ರೆ ಜಾಗವನ್ನು ಮೀಸಲಿರಿಸಲಾಗಿದೆ. ನೂತನ ಕಟ್ಟಡ ನಿರ್ಮಾಣ ಆಗುವ ತನಕ ಬಾಡಿಗೆ ಕಟ್ಟದಲ್ಲೇ ಕಾರ್ಯಕಲಾಪ ನಡೆಯಲಿದೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಪುತ್ತೂರು ನ್ಯಾಯವಾದಿಗಳಾದ ಲೋಕೇಶ್ ಎಂ.ಜೆ., ಶಿವಪ್ರಸಾದ್ ಪುತ್ತಿಲ, ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಕೃಷ್ಣಪ್ಪ ಗೌಡ ಕಕ್ವೆ, ಮನೋಹರ ಸಬಳೂರು, ಕೌಶಿಕ್ ಆಲಂಕಾರು, ಅರ್ಪಿತಾ ಪಿ., ಸುಮನಾ ಎಂ, ಕಟ್ಟಡ ಮಾಲೀಕ ಸುಂದರ ಗೌಡ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು.









