ದರ್ಶನ್‌ ತೂಗುದೀಪಗೆ ಸುಪ್ರೀಂ ಕೋರ್ಟ್‌ ಬಿಗ್ ಶಾಕ್‌



(ನ್ಯೂಸ್‌ ಕಡಬ) newskadaba.com,ಮೇ.15: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪಗೆ ಮತ್ತೊಮ್ಮೆ ದೊಡ್ಡ ಹಿನ್ನಡೆಯಾಗಿದೆ. ಪ್ರಕರಣದ ವಿಚಾರಣೆಯಲ್ಲಿ ಸಾಕ್ಷಿಗಳ ಪರಿಶೀಲನೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆ ದಟ್ಟವಾಗಿದೆ.







ಸಾಕ್ಷಿ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಉಲ್ಲೇಖಿಸಿ, ಜಾಮೀನು ಕೋರಿ ನಟ ದರ್ಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೇ ವೇಳೆ ದೀರ್ಘಕಾಲ ಜೈಲಿನಲ್ಲಿ ಇರುವುದರಿಂದ ತಮ್ಮ ಜೀವನೋಪಾಯ ಮತ್ತು ವೃತ್ತಿಜೀವನಕ್ಕೆ ಭಾರೀ ಹೊಡೆತ ಬೀಳುತ್ತಿದೆ ಎಂದು ತಮ್ಮ ಮನವಿಯಲ್ಲಿ ವಿವರಿಸಿದ್ದರು. ಆದರೆ ಕೋರ್ಟ್ ಈ ವಾದಗಳನ್ನು ಪರಿಗಣಿಸಿಲ್ಲ. ಮೇಲಾಗಿ, ಮುಂದಿನ ಒಂದು ವರ್ಷದವರೆಗೆ ಜಾಮೀನು ಕೇಳುವಂತಿಲ್ಲ ಎಂದು ಹೇಳಿ ದರ್ಶನ್‌ಗೆ ಸುಪ್ರೀಂ ಕೋರ್ಟ್‌ ದೊಡ್ಡ ಶಾಕ್ ನೀಡಿದೆ.






ಜಾಮೀನು ಅರ್ಜಿಯಲ್ಲಿ ದರ್ಶನ್ ತಮ್ಮ ಸಿನಿಮಾ ಬದುಕಿನ ಸಂಕಷ್ಟಗಳನ್ನು ವಿವರಿಸಿದ್ದರು. “ನಾನು ಪ್ರತಿವರ್ಷ ಸರಾಸರಿ 2 ರಿಂದ 3 ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮೀಡಿಯಾ ಹೌಸ್ ಸ್ಟೂಡಿಯೋಸ್‌ನಂತಹ ದೊಡ್ಡ ಬ್ಯಾನರ್‌ಗಳ ಚಿತ್ರಗಳಿಗೆ ಸಹಿ ಮಾಡಿದ್ದೇನೆ. ನಿರ್ಮಾಪಕರು ಸುಮಾರು 6 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸುದೀರ್ಘ ಜೈಲುವಾಸದಿಂದ ನನ್ನ ಸಿನಿ ಭವಿಷ್ಯಕ್ಕೆ ಮರಣಘಂಟೆಯಾಗಲಿದೆ” ಎಂದು ತಮ್ಮ ಮನವಿಯಲ್ಲಿ ದರ್ಶನ್ ಉಲ್ಲೇಖಿಸಿದ್ದರು. ಆದರೆ ಈ ವಾದಕ್ಕೂ ಕೋರ್ಟ್ ಮನ್ನಣೆ ನೀಡಲಿಲ್ಲ.

error: Content is protected !!
Scroll to Top