(ನ್ಯೂಸ್ ಕಡಬ) newskadaba.com ಮೇ. 14. ಧರ್ಮಸ್ಥಳದಲ್ಲಿ ಶವ ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸಿದ ಕಾರ್ಯಾಚರಣೆಯ ಬಿಲ್‌ಗಳು ಇನ್ನೂ ಪಾವತಿಯಾಗಿಲ್ಲ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾರ್ಮಿಕರು, ಜೆಸಿಬಿ ಮಾಲೀಕರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಒಟ್ಟು 2 ಲಕ್ಷ ರೂ. ಬಾಕಿ ಉಳಿದಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಎಸ್‌ಐಟಿ ತಂಡವು ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬಾತನನ್ನು ಧರ್ಮಸ್ಥಳಕ್ಕೆ ಕರೆತಂದು ಶೋಧ ಕಾರ್ಯ ನಡೆಸಿತ್ತು. ಆತ ನೀಡಿದ ಮಾಹಿತಿಯ ಆಧಾರದ ಮೇಲೆ, ತಂಡವು 17 ವಿವಿಧ ಸ್ಥಳಗಳನ್ನು ಗುರುತಿಸಿ ಶವದ ಅವಶೇಷಗಳಿಗಾಗಿ ಹೊಂಡಗಳನ್ನು ತೋಡಿ ಹತ್ತು ದಿನಗಳ ಕಾಲ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು.
ಆದರೆ ಜೆಸಿಬಿ ಮಾಲೀಕರು 71,500 ರೂ.ಗಳ ಬಿಲ್ ಸಲ್ಲಿಸಿದ್ದರೂ, ಈವರೆಗೆ ಹಣ ಬಿಡುಗಡೆಯಾಗಿಲ್ಲ. ಪ್ರತಿದಿನ 10 ರಿಂದ 12 ದಿನಗೂಲಿ ಕಾರ್ಮಿಕರು ಎಸ್‌ಐಟಿ ಅಧಿಕಾರಿಗಳಿಗೆ ಸಹಾಯ ಮಾಡಲು ಶ್ರಮಿಸಿದ್ದರು. ಇವರಿಗೆ ನೀಡಬೇಕಾದ ಒಟ್ಟು ಕೂಲಿ ಮೊತ್ತ 80,000 ರೂ. ದಾಟಿದೆ. ದಿನದ ದುಡಿಮೆಯನ್ನೇ ನಂಬಿರುವ ಈ ಬಡ ಕಾರ್ಮಿಕರು ಈಗ ತಮ್ಮ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.









