(ನ್ಯೂಸ್ ಕಡಬ) newskadaba.comಮೇ.08: ಕುಡಿಯುವ ನೀರಿನ ಯೋಜನೆಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಲು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ.
ನಗರದ ಪಡೀಲ್‌ನಲ್ಲಿರುವ ಪ್ರಜಾ ಸೌಧದಲ್ಲಿ ಗುರುವಾರ ನಡೆದ ಉಳ್ಳಾಲ ತಾಲೂಕು ಬರ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವೆಡೆ ಟ್ಯಾಂಕ್ ನಿರ್ಮಿಸಿ ಬೋರ್‌ವೆಲ್ ಕೊರೆಯಲಾಗಿದ್ದರೂ ವಿದ್ಯುತ್ ಸಂಪರ್ಕ ವಿಳಂಬವಾಗಿ ನೀರು ಪೂರೈಕೆಗೆ ತೊಂದರೆಯಾಗುತ್ತಿವೆ. ಡೆಪಾಸಿಟ್ ಮೊತ್ತಕ್ಕೆ ಕಾಯದೆ, ವಿದ್ಯುತ್ ಸಂಪರ್ಕ ನೀಡಲು ಈಗಾಗಲೇ ಸರಕಾರ ಸೂಚಿಸಿದೆ. ಮುಂದೆ ಗ್ರಾಪಂಗೆ ಅನುದಾನ ಬಂದಾಗ ಈ ಮೊತ್ತವನ್ನು ಹೊಂದಾಣಿಕೆ ಮಾಡುವಂತೆ ಖಾದರ್ ತಿಳಿಸಿದರು.
ಕುಡಿಯುವ ನೀರಿನ ಯೋಜನೆ ರೂಪಿಸುವಾಗ ಸ್ಥಳೀಯ ಸಮಸ್ಯೆಗಳನ್ನು ಅರಿತು ಅದಕ್ಕೆ ತಕ್ಕಂತೆ ಅನುಷ್ಠಾನ ಗೊಳಿಸಬೇಕು. ಮುಂದಿನ ೩೦ ವರ್ಷದ ನೀರಿನ ಬೇಡಿಕೆ ಪೂರೈಸಲು ಯೋಜನೆ ಸಹಕಾರಿಯಾಗಬೇಕು. ಅಗತ್ಯ ಬಿದ್ದರೆ ವಿಶೇಷ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಖಾದರ್ ಹೇಳಿದರು.
ಕುಡಿಯುವ ನೀರು ನಿರ್ವಹಣೆಗೆ ಅವಶ್ಯಕತೆಯಂತೆ ಅನುದಾನ ನೀಡಲಾಗುತ್ತಿದೆ. ಪೈಪ್ ಮೂಲಕ ನೀರು ಪೂರೈಕೆ ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಗ್ರಾಪಂ ಅನುದಾನದೊಂದಿಗೆ ಟಾಸ್ಕ್‌ಫೋರ್ಸ್ ನಿಂದಲೂ ಅನುದಾನ ನೀಡಲಾಗುವುದು ಎಂದು ಖಾದರ್ ಹೇಳಿದರು.
*ಮಳೆಗಾಲ ಸಿದ್ಧತೆ: ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ತೊಂದರೆಯಾಗುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಎಲ್ಲಾ ಚರಂಡಿಗಳ ಹೂಳೆತ್ತಲು ಕ್ರಮವಹಿಸಬೇಕು. ಕಳೆದ ವರ್ಷ ಪ್ರಾಕೃತಿಕ ದುರಂತಗಳು ನಡೆದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ದುರಂತಗಳು ನಡೆದರೆ ಸ್ಥಳೀಯ ಅಧಿಕಾರಿಗಳು ತಕ್ಷಣ ಭೇಟಿ ನೀಡಬೇಕು ಎಂದು ಸ್ಪೀಕರ್ ಖಾದರ್ ಸೂಚಿಸಿದರು.
ದ.ಕ.ಜಿಪಂ ಸಿಇಒ ವಿನಾಯಕ್ ಕಾರ್ಭರಿ ಮಾತನಾಡಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ೧ ಕೋ.ರೂ.ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧೨ ಲಕ್ಷ ರೂ. ನೀಡಲಾಗುವುದು ಎಂದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.









