ಹೆಂಡತಿ ಪರಾರಿ : ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ



(ನ್ಯೂಸ್‌ ಕಡಬ) newskadaba.com,  ಮೇ.02: ಹೆಂಡತಿ ಬೇರೋಬ್ಬನ ಜೊತೆ ಪರಾರಿಯಾಗಿದ್ದರಿಂದ ಮನನೊಂದ ಪತಿ ತನ್ನಿಬ್ಬರ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಡರಾತ್ರಿ ನಡೆದಿದೆ.







ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಆಲ್ಕೆರೆ ಗ್ರಾಮದ ಶಿವಣ್ಣ (40) ಎಂಬುವವರೇ ತನ್ನಿಬ್ಬರು ಮಕ್ಕಳಾದ ಜೀವನ್‌ (10), ಪ್ರಾಣೇಶ್‌ (6) ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆತಹತ್ಯೆಗೆ ಶರಣಾದವರು.






ಒಂದು ವಾರದ ಹಿಂದೆಯಷ್ಟೇ ಶಿವಣ್ಣ ಅವರ ಪತ್ನಿ ಕಾವ್ಯಾ ಅಕ್ಕನ ಮಗನಾದ ಹೇಮಂತ್‌ ಎಂಬುವವನ ಜೊತೆ ಪರಾರಿಯಾಗಿದ್ದಳು. ನಂತರ ಇದು ಪೊಲೀಸ್‌‍ ಠಾಣೆ ಮೆಟ್ಟಿಲೇರಿತ್ತು. ತದ ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯಿತಿ ನಡೆದು ಆಲ್ಕೆರೆ ಗ್ರಾಮಕ್ಕೆ ಆಕೆ ವಾಪಸ್‌‍ ಬಂದಿದ್ದಾಳೆ.

ಕಾವ್ಯಾ ಪತಿ ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಮತ್ತೆ ಪರಾರಿಯಾಗಿದ್ದಾಳೆ.ಇದರಿಂದ ಮನನೊಂದ ಶಿವಣ್ಣ ತಡರಾತ್ರಿ ತನ್ನಿಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ.

ಇಂದು ಬೆಳಗ್ಗೆ ಇವರ ಮನೆ ಬಾಗಿಲು ತೆರೆಯದಿರುವುದು ಗಮನಿಸಿ ಪಕ್ಕದ ಮನೆಯವರು ಹೋಗಿ ನೋಡಿದಾಗ ಮಂಚದ ಮೇಲೆ ಮಕ್ಕಳು ಮಲಗಿರುವ ಸ್ಥಿತಿಯಲ್ಲಿ ಹಾಗೂ ಶಿವಣ್ಣ ನೇಣಿನ ಕುಣಿಕೆಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ.

ತಕ್ಷಣ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕುಣಿಗಲ್‌ ಪೊಲೀಸ್‌‍ ಠಾಣೆ ಸಿಪಿಐ ಮಾಧ್ಯಾನಾಯಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಂದೆ, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಶಿವಣ್ಣ ಅವರ ತಾಯಿ ಹೊನ್ನಮ ಮೂರು ವರ್ಷಗಳ ಹಿಂದೆ ಸೊಸೆ ಕಾವ್ಯಾ ಕಾಟಕ್ಕೆ ಬೇಸತ್ತು ಬಾವಿಗೆ ಬಿದ್ದು ಸಾವನ್ನಪ್ಪಿದ್ದರು ಎಂಬುವುದು ಗೊತ್ತಾಗಿದೆ.

error: Content is protected !!
Scroll to Top