(ನ್ಯೂಸ್ ಕಡಬ) newskadaba.com, ಎ.28 ಮೇ 1 ರಿಂದ ಭಾರತದಾದ್ಯಂತ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದ್ದು, ಇದು ಲಕ್ಷಾಂತರ ಕುಟುಂಬಗಳ ಮೇಲೆ ಪ್ರಭಾವ ಬೀರಲಿದೆ. ಹೊಸ 3 ನಿಯಮ ಜಾರಿಗೆ ಬರಲಿದೆ.
ಸಬ್ಸಿಡಿ ಗ್ಯಾಸ್ ಕಾಳಸಂತೆಕೋರರ ಪಾಲಾಗುವುದನ್ನು ಮತ್ತು ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ , ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.
ಸಿಲಿಂಡರ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ
ನಗರ ಪ್ರದೇಶಗಳಲ್ಲಿ ಎರಡು ಎಲ್‌ಪಿಜಿ ಬುಕ್ಕಿಂಗ್‌ಗಳ ನಡುವಿನ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರವನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ. ನಿಗದಿತ ದಿನಗಳಿಗಿಂತ ಮುಂಚಿತವಾಗಿ ಬುಕ್ ಮಾಡಲು ಪ್ರಯತ್ನಿಸಿದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಆ ಬುಕ್ಕಿಂಗ್ ಅನ್ನು ತಡೆಹಿಡಿಯುತ್ತದೆ.
ಒಟಿಪಿ ಆಧಾರಿತ ವಿತರಣೆ ಕಡ್ಡಾಯ
ಹೊಸ ಮಾರ್ಗಸೂಚಿಗಳ ಪ್ರಕಾರ, ಮೇ 1 ರಿಂದ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ ಕಡ್ಡಾಯವಾಗಲಿದೆ. ಇನ್ನು ಮುಂದೆ ಕೇವಲ ಗ್ಯಾಸ್ ಬುಕ್ ಅಥವಾ ರಶೀದಿಯನ್ನು ತೋರಿಸಿ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಡೆಲಿವರಿ ಬಾಯ್‌ಗೆ ಈ ಒಟಿಪಿ ನೀಡಿದರಷ್ಟೇ ಸಿಲಿಂಡರ್ ಕೈಸೇರಲಿದೆ. ಗ್ಯಾಸ್ ಅಕ್ರಮಗಳನ್ನು ತಡೆಯಲು ಈಗಾಗಲೇ ಶೇ. 94.5 ರಷ್ಟು ಎಲ್‌ಪಿಜಿ ವಿತರಣೆಯನ್ನು ಈ ಕೋಡ್ ಮೂಲಕವೇ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.









