ಮೊಬೈಲ್ ಬಳಕೆದಾರರಿಗೆ ಕೇಂದ್ರದ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ 28ರ ಬದಲು 30 ದಿನಗಳ ರೀಚಾರ್ಜ್ ಪ್ಲಾನ್ ಲಭ್ಯ!



(ನ್ಯೂಸ್‌ ಕಡಬ) newskadaba.com,ಎ.01 : ದೇಶದ ಕೋಟ್ಯಂತರ ಮೊಬೈಲ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಆರ್ಥಿಕ ಸಮಾಧಾನ ನೀಡುವ ನಿರ್ಧಾರಕ್ಕೆ ಮುಂದಾಗಿದೆ. ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಕೇವಲ 28 ದಿನಗಳ ಬದಲಾಗಿ, ಪೂರ್ತಿ 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸೂಚಿಸಿದ್ದಾರೆ.







ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡುವ ಕಷ್ಟಕ್ಕೆ ಬ್ರೇಕ್!






​ಪ್ರಸ್ತುತ ಬಹುತೇಕ ಕಂಪನಿಗಳು 28 ದಿನಗಳ ಪ್ಲಾನ್ ನೀಡುತ್ತಿರುವುದರಿಂದ, ಗ್ರಾಹಕರು ವರ್ಷಕ್ಕೆ 12 ತಿಂಗಳ ಬದಲಾಗಿ 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇತ್ತು. ಇದು ಗ್ರಾಹಕರ ಜೇಬಿಗೆ ಹೊರೆಯಾಗುತ್ತಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಸಂಸದ ರಾಘವ್ ಚಡ್ಡಾ ಧ್ವನಿ ಎತ್ತಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

​30 ದಿನಗಳ ಕಡ್ಡಾಯ ಪ್ಲಾನ್: ಎಲ್ಲಾ ಆಪರೇಟರ್‌ಗಳು ಕನಿಷ್ಠ ಒಂದು ಪ್ಲಾನ್ ಆದರೂ ಪೂರ್ತಿ 30 ದಿನಗಳ ವ್ಯಾಲಿಡಿಟಿ ಹೊಂದಿರುವಂತೆ ನೋಡಿಕೊಳ್ಳಬೇಕು.

​ಗ್ರಾಹಕ ಸ್ನೇಹಿ ಆಯ್ಕೆ: 28 ದಿನಗಳ ಪ್ಲಾನ್ ಇರಲಿದೆ, ಆದರೆ ಅದರ ಜೊತೆಗೆ ತಿಂಗಳ ಪೂರ್ತಿ ಅನ್ವಯವಾಗುವ 30 ದಿನಗಳ ಪ್ಲಾನ್ ಇರುವುದು ಕಡ್ಡಾಯ.

​ಡೇಟಾ ರೋಲ್‌ಓವರ್ ಸಾಧ್ಯತೆ: ಪ್ರತಿದಿನದ ಡೇಟಾದಲ್ಲಿ ಉಳಿಕೆಯಾದ ಭಾಗವನ್ನು (ಉದಾಹರಣೆಗೆ 1.5GB ಯಲ್ಲಿ ಉಳಿದ 500MB) ಮರುದಿನಕ್ಕೆ ವರ್ಗಾಯಿಸುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಡೇಟಾ ವ್ಯರ್ಥವಾಗುವುದಕ್ಕೆ ಬೀಳಲಿದೆಯೇ ಕಡಿವಾಣ?

​ಬಳಸದ ಡೇಟಾ ವ್ಯರ್ಥವಾಗಬಾರದು ಎಂಬ ಸಂಸದರ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಂದು ವೇಳೆ ‘ಡೇಟಾ ರೋಲ್‌ಓವರ್’ ನಿಯಮ ಜಾರಿಗೆ ಬಂದರೆ, ಗ್ರಾಹಕರು ತಾವು ಹಣ ಪಾವತಿಸಿದ ಪೂರ್ತಿ ಡೇಟಾವನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ.

​ಈ ಹಿಂದೆ 2022ರಲ್ಲಿ ಟ್ರಾಯ್ (TRAI) ಇಂತಹ ಸೂಚನೆ ನೀಡಿದ್ದರೂ ಹಲವು ಕಂಪನಿಗಳು ಇದನ್ನು ಸರಿಯಾಗಿ ಪಾಲಿಸಿರಲಿಲ್ಲ. ಆದರೆ ಈಗ ಕೇಂದ್ರ ಸಚಿವರ ನೇರ ಸೂಚನೆಯಿಂದಾಗಿ ಶೀಘ್ರದಲ್ಲೇ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ನಿರೀಕ್ಷಿತವಾಗಿವೆ.

error: Content is protected !!
Scroll to Top