(ನ್ಯೂಸ್ ಕಡಬ) newskadaba.com, ಮಾ.17 ಬೆಂಗಳೂರು: ‘ಕಾನೂನು ಪ್ರಕಾರ ಬಾಲ್ಯವಿವಾಹ ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ದೇವಸ್ಥಾನಗಳು, ಕಲ್ಯಾಣ ಮಂಟಪಗಳು ಸೇರಿದಂತೆ ವಿವಾಹಗಳು ನಡೆಯುವ ಎಲ್ಲಾ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ದೇವನಹಳ್ಳಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಎನ್. ಮಂಜುನಾಥ್ ಸೇರಿ ಐವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.
ನ್ಯಾಯಪೀಠವು ಬಾಲ್ಯವಿವಾಹ ಪ್ರಕರಣಗಳ ಏರಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿ, ‘ಬಾಲ್ಯವಿವಾಹ ನಿರ್ಮೂಲನೆ ಕೇವಲ ಶಾಸನಬದ್ಧ ಗುರಿಯಲ್ಲ, ಅದು ಸಾಂವಿಧಾನಿಕ ಕಡ್ಡಾಯ’ ಎಂದು ಸ್ಪಷ್ಟಪಡಿಸಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳು ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದೆ.
ಕೇರಳ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಬಾಲ್ಯವಿವಾಹವು ಬಾಲಕಿಯರ ಶಿಕ್ಷಣಕ್ಕೆ ಅಡ್ಡಿ ಉಂಟುಮಾಡುವುದರ ಜೊತೆಗೆ ಅವರ ಭವಿಷ್ಯಾವಕಾಶಗಳನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದೆ. ಇದರಿಂದ ಗೃಹಹಿಂಸೆ, ಮಾನಸಿಕ ಆಘಾತ, ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನದ ಚಕ್ರ ಮುಂದುವರಿಯುವ ಸಾಧ್ಯತೆ ಹೆಚ್ಚುತ್ತದೆ ಎಂದು ಎಚ್ಚರಿಸಿದೆ.
ಪುರೋಹಿತರು, ಆಯೋಜಕರಿಗೂ ಎಚ್ಚರಿಕೆ
ಬಾಲ್ಯವಿವಾಹವನ್ನು ನಡೆಸುವ, ಪ್ರೋತ್ಸಾಹಿಸುವ ಅಥವಾ ಸುಗಮಗೊಳಿಸುವ ಯಾರೇ ಆಗಲಿ ಕಾನೂನುಬದ್ಧವಾಗಿ ಹೊಣೆಗಾರರಾಗುತ್ತಾರೆ. ಮದುವೆ ಮಾಡಿಸುವ ಪುರೋಹಿತರು, ಸಂಬಂಧಿಕರು ಹಾಗೂ ಆಯೋಜಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.
- ಪ್ರಕರಣದ ಹಿನ್ನೆಲೆ
- ಕೋವಿಡ್ ಸಂದರ್ಭದಲ್ಲಿ 16 ವರ್ಷದ ಬಾಲಕಿಯನ್ನು 27 ವರ್ಷದ ಯುವಕನಿಗೆ ವಿವಾಹ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯ ದೂರಿನ ಮೇರೆಗೆ ಐವರು ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ.








